ಜಿಲ್ಲೆ

ಗ್ರಾಮೀಣ ಭಾಗದಲ್ಲಿ ಆರೋಗ್ಯ ಜಾಗೃತಿ ಹೆಚ್ಚಾಗಿ ಆಗಬೇಕು

ಚಿಲಕವಾಡಿಯ ನಿಜಗುಣಾನುಭವ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಕಣ್ಣಿನ ಉಚಿತ ಶಿಬಿರದಲ್ಲಿ ಚಿಲಕವಾಡಿಯ ನಿಜಗುಣ ಪೀಠದ ಶ್ರೀ ಬಾಲಷಡಕ್ಷರಿ ಸ್ವಾಮೀಜಿ ಮಾತನಾಡಿದರು. ಗಂಗಾಮಣಿ, ನಾಗರತ್ನಮ್ಮ ಇತತರು ಇದ್ದರು.

ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿಯ ನಿಜಗುಣಾನುಭವ ಮಂಟಪದಲ್ಲಿ ಸೋಮವಾರ ಚಿಲಕವಾಡಿಯ ನಿಜಗುಣ ಪೀಠ, ಚಾಮರಾಜನಗರ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಮೈಸೂರಿನ ಎಂಆರ್‌ಸಿ ಕಣ್ಣಿನ ಆಸ್ಪತ್ರೆಯ ಸಹಯೋಗದಿಂದ ಬೃಹತ್ ಕಣ್ಣಿನ ತಪಾಸಣೆ ಉಚಿತ ಶಿಬಿರವನ್ನು ಏರ್ಪಡಿಸಲಾಗಿತ್ತು.


ಶಿಬಿರದ ಪ್ರಯುಕ್ತ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಚಿಲಕವಾಡಿಯ ನಿಜಗುಣ ಪೀಠದ ಶ್ರೀ ಬಾಲಷಡಕ್ಷರಿ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಜಾಗೃತಿ ಇನ್ನೂ ಹೆಚ್ಚಿನ ರೀತಿಯಲ್ಲಿ ಆಗಬೇಕಿದೆ. ದಿನ ನಿತ್ಯದ ಕೆಲಸಗಳ ಒತ್ತಡದಲ್ಲಿ ಇಲ್ಲಿನ ಮುಗ್ಧ ಜನರು ತಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸುವುದಿಲ್ಲ. ಹಗಲಿರುಳು ಎನ್ನದೆ ತಮ್ಮ ಕರ್ತವ್ಯ, ಕಾಯಕದಲ್ಲಿ ನಿರತರಾಗಿರುತ್ತಾರೆ. ಅಂತೆಯೆ ಬಡ ವರ್ಗದ ಜನರು ಅಧಿಕ ಪ್ರಮಾಣದಲ್ಲಿ ಇರುವುದರಿಂದ ಚಿಲಕವಾಡಿಯ ನಿಜಗುಣಾನುಭವ ಮಠದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ ಆಯೋಜಿಸಿದ್ದೇವೆ. ದೇಹದ ಅಂಗಾಗಳಲ್ಲಿ ಪ್ರಮುಖ ಪಾತ್ರ ವಹಿಸುವ ಕಣ್ಣು ಬಹಳ ಸೂಕ್ಷ್ಮವಾದದ್ದು. ನಾಗರಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.


65 ಜನರಿಗೆ ತಪಾಸಣೆ: ಶಿಬಿರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಿತು. ಚಿಲಕವಾಡಿಯ ಸುತ್ತಮುತ್ತಲ ಗ್ರಾಮಗಳಿಂದ 65 ಜನರು ಭಾಗವಹಿಸಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಈ ವೇಳೆ 14 ರೋಗಿಗಳನ್ನು ಮೈಸೂರಿನ ಎಂಆರ್‌ಸಿ ಕಣ್ಣಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿ ಕಳುಹಿಸಿಕೊಡಲಾಯಿತು.


ಕಾರ್ಯಕ್ರಮದಲ್ಲಿ ಹೊನ್ನೂರು ಮಠದ ಭಿಕ್ಷದ ಸ್ವಾಮಿಗಳಾದ ಶ್ರೀ ಮಹದೇವ ಸ್ವಾಮೀಜಿ, ಕುಂತೂರು ಗ್ರಾಪಂ ಅಧ್ಯಕ್ಷೆ ಗಂಗಾಮಣಿ, ಉಪಾಧ್ಯಕ್ಷೆ ನಾಗರತ್ನಮ್ಮ, ಚಾಮರಾಜನಗರ ರೋಟರಿ ಮಾಜಿ ಅಧ್ಯಕ್ಷ ಕೆಂಪನಪುರ ಮಹದೇವಸ್ವಾಮಿ, ಕೆಸ್ತೂರು ಗ್ರಾಪಂ ಅಧ್ಯಕ್ಷೆ ಕೋಮಲಾ ಮಹದೇವಸ್ವಾಮಿ, ಸದಸ್ಯ ಮಹೇಶ್, ಮುಖಂಡ ಜಿ.ಸಿದ್ದಶೆಟ್ಟಿ, ಕುಂತೂರು ಮೋಳೆ ಹಾಗೂ ಎಂಆರ್‌ಸಿ ಆಸ್ಪತ್ರೆಯ ವೈದ್ಯರು, ಮಠದ ಭಕ್ತರು ಇದ್ದರು.