ಜಿಲ್ಲೆ

ಗ್ರಾಮೀಣ ಭಾಗದ ರಂಗಕಲಾವಿದರಿಗೆ ಪ್ರೋತ್ಸಾಹ ಅಗತ್ಯ

*ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ ಸಲಹೆ 

*ರಂಗತರಂಗ ರಂಗೋತ್ಸವ ಕಾರ್ಯಕ್ರಮಕ್ಕೆ ಚಾಲನೆ 

ಚಾಮರಾಜನಗರ: ಗ್ರಾಮೀಣ ಭಾಗದ ರಂಗಕಲಾವಿದರಿಗೆ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದು, ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ ಸಲಹೆ ನೀಡಿದರು.

ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ರಂಗತರಂಗ ಸಂಸ್ಥೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ನಾಟಕೋತ್ಸವ ಹಾಗೂ ರಂಗಭೀಷ್ಮ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ರಂಗಕಲಾವಿದರು ಹೆಚ್ಚಾಗಿ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ೩೦ ವರ್ಷಗಳಿಂದ ರಂಗತರಂಗ ಸಂಸ್ಥೆ ರಂಗಭೂಮಿಗೆ ತನ್ನದೇಯಾದ ಸೇವೆಯನ್ನು ಸಲ್ಲಿಸಿದೆ. ಅನೇಕ ಕಲಾವಿದರನ್ನು ಹುಟ್ಟುಹಾಕಿ ಬೆಳೆಸಿದೆ. ರಂಗತರಂಗ ಗುಣಾತ್ಮಕ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿರುವ ರಂಗಭೂಮಿ ಕಲಾವಿದರನ್ನು ಪ್ರೇಕ್ಷಕರು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಿ ಬೆಳೆಸಬೇಕು. ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳು ಹಾಗೂ ನಾಟಕಗಳಿಗೆ ಪ್ರೇಕ್ಷಕರ ಕೊರತೆ ಕಂಡು ಬರುತ್ತಿದೆ. ರಂಗಭೂಮಿ ಕಲಾವಿದರಿಗೆ ಉತ್ತೇಜನ ನೀಡಿದಾಗ ಮಾತ್ರ ಸಾಂಸ್ಕೃತಿಕ ನೆಲೆಯನ್ನು ಉಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೂರು ದಿನಗಳ ಪೌರಾಣಿಕ ನಾಟಕಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಬೇಕು ಎಂದರು.

ರಂಗತರಂಗ ಸಂಸ್ಥೆ ಅಧ್ಯಕ್ಷ ಬಿಸಲವಾಡಿ ಸೋಮಶೇಖರ್ ಮಾತನಾಡಿ, ಕಳೆದ ೩೦ ವರ್ಷಗಳಿಂದ ರಂಗತರಂಗ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕಲಾವಿದರು, ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾದ ಅಂಬಳೆ ಸಿದ್ದರಾಜು, ಸುಜಾತಾ, ಯಡಿಯೂರು ಮಹಾದೇವ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ಶಿವಶಂಕರ್ ಚೆಟ್ಟು ಹಾಗೂ ಇತರರು ಉಪಸ್ಥಿತರಿದ್ದರು.