ಜಿಲ್ಲೆ

ಗ್ರಾಮೀಣ ಭಾಗದ ಮೂಲಸೌಕರ್ಯಕ್ಕೆ ಒತ್ತು

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಚಾ.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ತಾಲೂಕಿನ ತಮ್ಮಡಹಳ್ಳಿ ಗ್ರಾಮದಲ್ಲಿ ಸೋಮವಾರ 1 ಕೋಟಿ ರೂ. ವೆಚ್ಚದ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯಡಿ ನಡೆಸುತ್ತಿರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ವಸತಿಸೌಲಭ್ಯ ಕಲ್ಪಿಸಲಾಗಿದೆ. ತಮ್ಮಡಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ ವಾಸ ಮಾಡುವ ಜನರಿಗೆ 50 ಲಕ್ಷ ರೂ. ಪರಿಶಿಷ್ಟ ಪಂಗಡದ ನಾಯಕರ ಬಡಾವಣೆಗೆ 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.

ಗ್ರಾಮಗಳಿಗೆ ಅಗತ್ಯವಾಗಿ ಬೇಕಾದ ರಸ್ತೆ, ಚರಂಡಿ, ಸಮುದಾಯ ಭವನ, ಕುಡಿಯುವ ನೀರು ಸೇರಿದಂತೆ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ನಂಜೇದೇವನಪುರ ಗ್ರಾಪಂ ಅಧ್ಯಕ್ಷ ಶೇಖರಪ್ಪ, ಉಪಾಧ್ಯಕ್ಷ ಪಟೇಲ್‌ಗುರುಮಲ್ಲಪ್ಪ, ತಾ.ಪಂ ಮಾಜಿ ಸದಸ್ಯ ಸುಬ್ಬನಾಯಕ, ಗ್ರಾಪಂ ಸದಸ್ಯರಾದ ಮಹೇಶ್, ಸಿದ್ದರಾಜು, ಎಸ್‌ಪಿಕೆ ಉಮೇಶ್, ಎಪಿಎಂಸಿ ಮಾಜಿ ಸದಸ್ಯ ಬಸವನಾಯಕ, ರಮೇಶ್, ಬಂಗಾರನಾಯಕ, ಚಿನ್ನನಾಯಕ, ಸಿದ್ದನಾಯಕ, ಇಂಜಿನಿಯರ್ ಭೀಮ್‌ಸಾಗರ್ ಇತರರು ಹಾಜರಿದ್ದರು.