ಜಿಲ್ಲೆ

ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಅವಶ್ಯ

ಮೈಸೂರು: ಹಳ್ಳಿಗಳಲ್ಲಿ ಶಿಕ್ಷಣ ಕಲಿತರೆ ವಿದ್ಯಾವಂತರು, ಪ್ರತಿಭಾವಂತರು, ಉತ್ತಮ ಪ್ರಜೆಗಳಾಗಬಹುದು. ಸಮಾನತೆಯಿಂದ ಇರುವ ಜತೆಗೆ, ಅಸಮಾನತೆಯನ್ನು ನಿವಾರಿಸಿ ಸಮಾನವಾಗಿ ಇರಬಹುದಾಗಿದೆ. ಒಂದು ವೇಳೆ ಶಿಕ್ಷಣ ಸರಿಯಾಗಿ ದೊರೆಯದಿದ್ದರೆ ಸಮಸ್ಯೆಯಾಗಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು

ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಮತ್ತು ಮಯೂರಿ ಸಹಯೋಗದಲ್ಲಿ ಮೈಸೂರು ತಾಲೂಕಿನ ಮಂಡಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ನೂತನ ಶೌಚಗೃಹ ಕಟ್ಟಡ ಹಾಗೂ ಗ್ರಂಥಾಲಯ ಕಟ್ಟಡದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮಾಂತರ ಪ್ರದೇಶದ ಬಡವರು, ಮಧ್ಯಮ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕೊಡಬೇಕು. ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿದರೆ ಹಾಜರಾತಿ ಪ್ರಮಾಣ ಹೆಚ್ಚಾಗಲಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಡವರ ಮಕ್ಕಳು ಶಿಕ್ಷಣ ಕಲಿಯಲು ಹೆಚ್ಚಾಗಿ ಬರುತ್ತಾರೆ. ಬಡವರು, ಹಿಂದುಳಿದ, ಶೋಷಿತರ ಮಕ್ಕಳು ಶಿಕ್ಷಣ ಕಲಿಯಬೇಕು ಎನ್ನುವ ಆಶಯದಿಂದಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣದ ಮಹತ್ವವನ್ನು ಸಾರಿದರು. ಅಂಬೇಡ್ಕರ್ ಹೇಳಿದಂತೆ ಶಿಕ್ಷಣವೇ ದೊಡ್ಡ ಆಸ್ತಿ ಎನ್ನುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ಹಳ್ಳಿಗಳ ಶಾಲೆಗಳಲ್ಲಿ ಬಡವರು, ಶ್ರೀಮಂತರು ಎನ್ನದೆ ಸಮಾನ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣದ ಜತೆಗೆ, ಇಂಗ್ಲಿಷ್ ತರಗತಿ ನಡೆಯಲಿದೆ. ಬೇರೆ ಬೇರೆ ಸರ್ಕಾರಿ ಶಾಲೆಗಳು ಮಂಡಕಳ್ಳಿ ಶಾಲೆಯ ಕಡೆಗೆ ನೋಡುವಂತೆ ಮಾದರಿ ಶಾಲೆಯಾಗಿ ಹೊರಹೊಮ್ಮಬೇಕು ಎಂದು ನುಡಿದರು.

ನಮ್ಮ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಗೆ ಶೌಚಗೃಹ, ಗ್ರಂಥಾಲಯದ ನಿರ್ವಹಣೆಯ ಹೊಣೆಯನ್ನು ವಹಿಸಲಾಗಿದೆ. ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಶಾಲೆಯನ್ನು ನಿರ್ವಹಣೆ ಮಾಡಲು ಗಮನಹರಿಸಬೇಕು. ಪರಿಸರ, ಸ್ವಚ್ಛತೆಯ ಕಾಳಜಿ ವಹಿಸಬೇಕು. ನಾವು ನಮ್ಮ ಶಾಲೆಯನ್ನು ಮನೆಯಂತೆ ಭಾವಿಸಬೇಕು. ಮನೆಯನ್ನು ನೋಡಿಕೊಳ್ಳುವಂತೆ ಕೆಲಸ ಮಾಡುವ ದೇವಾಲಯವನ್ನು ನೋಡಬೇಕಿದೆ ಎಂದರು.

ಶಾಲೆಗೆ ಯಾರೂ ದ್ರೋಹ ಮಾಡಬಾರದು. ದೇವಾಲಯ ಇದ್ದಂತೆ. ಪ್ರೀತಿ, ವಿಶ್ವಾಸದಿಂದ ನೋಡಿಕೊಂಡು ಹೋಗಬೇಕು. ಶಾಲೆಯ ಕೊಠಡಿಗೆ ಕಿಡಿಗೇಡಿಗಳು ಕಲ್ಲು ತೂರುತ್ತಾರೆಂದರೆ ಏನರ್ಥ. ಅಂತಹವರನ್ನು ನೀವೇ ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಬೇಕು ಎಂದು ಗ್ರಾಮದ ಮುಖಂಡರಿಗೆ ಸೂಚಿಸಿದರು.

ಗ್ರಾಮದಲ್ಲಿ ರಾಜಕೀಯ, ಪಕ್ಷ, ಜಾತಿ ಶಾಲೆಯ ಕಾಂಪೌಂಡ್‌ನಿಂದ ಹೊರಗೆ ಇರಬೇಕು. ಶಾಲೆಯ ಒಳಗೆ ಬಂದರೆ ನಾವೆಲ್ಲರೂ ಒಂದೇ ಎನ್ನುವುದು ಇರಬೇಕು. ಅದೇ ರೀತಿ ಶಿಕ್ಷಕರು ಗುರು ಎನ್ನುವ ಭಾವನೆ ಅರಿತು ಕೆಲಸ ಮಾಡಬೇಕು. ಕೆಲವು ಶಿಕ್ಷಕರಿಗೆ ಗುರುಗಳ ಸ್ಥಾನದಲ್ಲಿ ಇರುವ ನಾವು ಹೇಗಿರಬೇಕು ಎಂಬುದು ಗೊತ್ತಿರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳನ್ನು ಒದಗಿಸಲಾಗಿದೆ. ಮಕ್ಕಳಿಗೆ ಹೆಚ್ಚಿನ ಜ್ಞಾನ ಸಿಗುವಂತೆ ಮಾಡಬೇಕು. ಶಾಲೆಗೆ ಬೇಕಾದ ಕೊಠಡಿಗಳು, ಮೂಲ ಸೌಕರ್ಯವನ್ನು ಒದಗಿಸಲಾಗುವುದು ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ಅನೇಕ ಗ್ರಾಮಗಳ ಹಿರಿಯ ಮತ್ತು ಪ್ರೌಢಶಾಲೆಗಳಿಗೆ ಸಿಎಸ್‌ಆರ್ ನಿಧಿ, ಲಯನ್ಸ್, ರೋಟರಿ ಸಂಸ್ಥೆಗಳ ಮೂಲಕ ಶಾಲಾ ಕೊಠಡಿ, ಗ್ರಂಥಾಲಯ, ಶೌಚಗೃಹ ಕಟ್ಟಡವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಕೆನರಾ ಬ್ಯಾಂಕ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಎನ್.ಶಾಮರಾವ್, 317ರ ಜಿಲ್ಲೆ ಜಿಲ್ಲಾ ಪ್ರಾಂತಪಾಲ ಕೆ.ಎಲ್.ರಾಜಶೇಖರ್, ಜಿಲ್ಲಾ ಮಾಜಿ ಪ್ರಾಂತಪಾಲ ಎನ್.ಸುಬ್ರಹ್ಮಣ್ಯ, ಎಂಡಿಡಿಎ ಅಧ್ಯಕ್ಷ ಎಸ್.ಮೂರ್ತಿ, ಜಯಕುಮಾರ್, ಜಯರಾಮು, ವೆಂಕಟೇಶ್, ಎಲ್‌ಸಿಎಂ ನಿಸರ್ಗ ಅಧ್ಯಕ್ಷ ಕುಮಾರ, ಎಲ್‌ಸಿಎಂ ಮಯೂರಿ ಅಧ್ಯಕ್ಷೆ ಸುಮಿತ್ರಾ ಮೂರ್ತಿ ಇದ್ದರು.