ರಾಮನಗರ: ಕರೊನಾ ಆತಂಕದ ನಡುವೆ ಜಿಲ್ಲೆಯಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ ನಡೆದಿದೆ.
ನಗರದ ಪ್ರದೇಶದಲ್ಲಿ ಅಷ್ಟೇನೂ ಕಳೆಗಟ್ಟದ ಹಬ್ಬ, ಗ್ರಾಮೀಣ ಭಾಗದಲ್ಲಿ ಸಂಭ್ರಮದಿಂದ ಕೂಡಿತ್ತು. ಹೆಣ್ಣು ಮಕ್ಕಳು ಎಳ್ಳು ಬೀರುವ ಮೂಲಕ ಹಬ್ಬದ ಸಡಗರವನ್ನು ಹೆಚ್ಚಿಸಿದರು. ಶನಿವಾರ ಸಂಜೆ ವೇಳೆ ಸಿಂಗಾರಗೊಂಡಿದ್ದ ಮಕ್ಕಳು, ಅಕ್ಕಪಕ್ಕದ ಮನೆಗೆ ತೆರಳಿ ಎಳ್ಳು ಬೆಲ್ಲ ಹಂಚುತ್ತಿದ್ದ ದಶ್ಯ ಗ್ರಾಮೀಣ ಹಬ್ಬದ ಸಂಭ್ರಮವನ್ನು ಹೆಚ್ಚಿಸುವಂತೆ ಮಾಡಿತ್ತು. ಶನಿವಾರ ರಾಸುಗಳ ಮೈ ತೊಳೆದು ಸಿಂಗರಿಸಿ, ಸಂಜೆಯ ವೇಳೆಗೆ ಗ್ರಾಮೀ ಭಾಗದಲ್ಲಿ ಕಿಚ್ಚು ಹಾಯಿಸಲಾಯಿತು. ನಗರ ಪ್ರದೇಶದಲ್ಲಿ ವಾರಾಂತ್ಯದ ಕರ್ಫ್ಯೂ ಹಬ್ಬದ ಸಂಭ್ರಮವನ್ನು ಕಡಿಮೆ ಮಾಡಿದರೆ, ಗ್ರಾಮೀಣ ಪ್ರದೇಶಗಳಲ್ಲಿ ಎಂದಿನಂತೆ ಹಬ್ಬದ ಸಡಗರ ಮುಂದುವರಿದಿತ್ತು.
ಎಳ್ಳು ಬೆಲ್ಲ ಹಂಚಿ ಶುಭಾಶಯ ಕೋರಿದ ಹೆಣ್ಮಕ್ಕಳು
ಕೈಲಾಂಚ ಹೋಬಳಿಯಾದ್ಯಂತ ಜನರು ಸಂತೋಷ, ಉಲ್ಲಾಸದೊಂದಿಗೆ ಶನಿವಾರ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಸಂಜೆ ಜಾನುವಾರುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸಿ ಸಂಭ್ರಮಿಸಿದರು. ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ ಗ್ರಾಮದ ಪ್ರತಿ ಮನೆಗೆ ಎಳ್ಳು ಬೆಲ್ಲ ಕಬ್ಬು ಹಂಚಿ ಹಬ್ಬದ ಶುಭಾಶಯ ಕೋರಿದರು.
ಗ್ರಾಮದ ಕೆರೆ ಕುಂಟೆಗಳಲ್ಲಿ ರೈತರು ದನ ಕರುಗಳ ಮೈತೊಳೆದು, ಹೊಸ ಹಗ್ಗ, ಶಂಖ, ಕರಿಹುರಿ, ಗೆಜ್ಜೆ, ಕೊಂಬಿಗೆ ಬಣ್ಣದ ಹಾರ, ಬಲೂನ್‌ಗಳನ್ನು ಕಟ್ಟಿ ಶೃಂಗರಿಸಿದ್ದರು. ಸಿಂಗಾರಗೊಂಡ ದನಕರುಗಳನ್ನು ತಮಟೆ ವಾದನದೊಂದಿಗೆ ಮೆರವಣಿಗೆಯಲ್ಲಿ ತಂದು ಗ್ರಾಮದ ನಿರ್ದಿಷ್ಟ ಜಾಗದಲ್ಲಿ ಕಿಚ್ಚು ಹಾಯಿಸಿದರು.