ಜಿಲ್ಲೆ

ಗ್ರಾಮೀಣ ಪ್ರದೇಶಗಳಲ್ಲೂ ಸಾಹಿತ್ಯ ಚಟುವಟಿಕೆಗಳಿಗೆ ಒತ್ತು

ಚಿತ್ರದುರ್ಗ: ಗ್ರಾಮೀಣ ಪ್ರದೇಶಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳನ್ನು ಏರ್ಪಡಿಸಲಾಗುವುದು ಎಂದು ಕಸಾಪ ಚಿತ್ರದುರ್ಗ ತಾಲೂಕು ಘಟಕದ ಅಧ್ಯಕ್ಷ ರಾಮಲಿಂಗ ಶೆಟ್ಟಿ ಹೇಳಿದರು.

ತಾಲೂಕಿನ ಕೂನಬೇವು ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಹೋಬಳಿ ಅಧ್ಯಕ್ಷರ ಪದಗ್ರಹಣ, ಸಿರಿಗೆರೆಯ ಟಿ.ಆರ್.ಅವಿನಾಶ್ ಅವರ ತತ್ವ ಸಾರುವ ಪೈರು ಕವನ ಸಂಕಲನ ಬಿಡುಗಡೆ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಲು ಕಸಾಪ ಹೋಬಳಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.ಭರಮಸಾಗರ, ತುರುವನೂರು ಹೋಬಳಿ ಘಟಕಗಳನ್ನು ಸ್ಥಾಪಿಸಲಾಗಿದ್ದು ಜಿಲ್ಲೆಯ ಎಲ್ಲ ಹೋಬಳಿಗಳಲ್ಲೂ ಪರಿಷತ್ ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.

ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ಮಾತನಾಡಿ,ಘಟಕಗಳ ಜವಾಬ್ದಾರಿಯನ್ನು ಹೊತ್ತವರು ತಿಂಗಳಿಗೆ ಕನಿಷ್ಠ ಒಂದು ಕಾರ‌್ಯಕ್ರಮ ಆಯೋಜಿಸಬೇಕು. ಕನ್ನಡದ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ತಿಳಿಸಿದರು.

ರಾಮಲಿಂಗಶೆಟ್ಟಿ ಅವರು ತುರುವನೂರು ಹೋಬಳಿ ಘಟಕದ ಅಧ್ಯಕ್ಷ ಎ.ಬಸಣ್ಣ ಅವರಿಗೆ ಪರಿಷತ್ ಬಾವುಟ ಹಸ್ತಾಂತರಿಸಿದರು. ಪರಿಷತ್ ತಾಲೂಕು ಘಟಕದ ಪದಾಧಿಕಾರಿಗಳಾದ ವೆಂಕಟೇಶ್, ಎಂ.ವಿಶ್ವನಾಥ್, ತಿಪ್ಪೇಸ್ವಾಮಿ ಮತ್ತಿತರರಿದ್ದರು.