ಕಡೂರು ತಾಲೂಕಿನ ಹಿರೇಗರ್ಜೆ ಗ್ರಾಮದಲ್ಲಿ ಶುದ್ಧ್ದಗಂಗಾಘಟಕ ನಿರ್ಮಾಣಕ್ಕೆ ಗ್ರಾಪಂ ಅಧ್ಯಕ್ಷೆ ಸುಮಾ ಮಹೇಶ್ ಶಂಕುಸ್ಥಾಪನೆ ನೆರವೇರಿಸಿದರು. ಡಿ.ಉಮೇಶ್, ರವಿ, ಹಾಲಪ್ಪ, ಅಶೋಕ್, ಗಿರೀಶ್ ಇತರರಿದ್ದರು. 
ಜಿಲ್ಲೆ

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು

ಕಡೂರು: ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ದೊಣ್ಣೇಕೋರನಹಳ್ಳಿ ಉಮೇಶ್ ಹೇಳಿದರು.

ಹಿರೇಗರ್ಜೆ ಗ್ರಾಮದಲ್ಲಿ ಶುಕ್ರವಾರ 12 ಲಕ್ಷ ರೂಪಾಯಿ ವೆಚ್ಚದ ಶುದ್ಧಗಂಗಾ ಘಟಕ ಸ್ಥಾಪನೆಗೆ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ನಡುವೆಯೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗಿವೆ ಎಂದರು.

ಎಲ್ಲ ವರ್ಗದವರಿಗೂ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಅದರಲ್ಲಿ ವಿಪಕ್ಷದವರೂ ಇದ್ದಾರೆ. ಒಂದು ಕಡೆ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುವ ವಿಪಕ್ಷದವರು ಮತ್ತೊಂದು ಕಡೆ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆ ಬಗ್ಗೆ ಅಸಮಾಧಾನವಿದ್ದರೆ ಮೊದಲು ಯೋಜನೆಯನ್ನು ತ್ಯಜಿಸಲಿ ಎಂದು ಹೇಳಿದರು.

ಹಿಂದುಳಿದ ವರ್ಗಗದವರು ಹೆಚ್ಚಾಗಿ ವಾಸಿಸುತ್ತಿರುವ ಗ್ರಾಮಗಳನ್ನು ಗುರುತಿಸಿ ಶುದ್ಧಗಂಗಾ ಘಟಕಗಳ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಒತ್ತುನೀಡಿ ಅನುದಾನ ನೀಡುತ್ತಿದ್ದಾರೆ. ಶ್ರೀಮಂತರು ಮನೆಗಳಿಗೆ ವಾಟರ್ ಫ್ಯೂರಿಫೈಯರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆ. ಆದರೆ ಬಡವರು ಪಕ್ಕದ ಊರಿಗೆ ಹೋಗಿ ಶುದ್ಧ ಕುಡಿಯುವ ನೀರು ತರುವಷ್ಟು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಕೆಲವರ ಮನೆಗಳಲ್ಲಿ ಪಕ್ಕದ ಗ್ರಾಮಕ್ಕೆ ಹೋಗಿಬರಲು ದ್ವಿಚಕ್ರವಾಹನವೂ ಇರುವುದಿಲ್ಲ. ಇದನ್ನೆಲ್ಲ ಅರಿತು ಶಾಸಕರು ಶುದ್ಧಗಂಗಾ ಘಟಕಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರಿಂದ ಊರಿನಲ್ಲಿಯೇ ಶುದ್ಧ ಕುಡಿಯುವ ನೀರು ಜನರಿಗೆ ಲಭಿಸಲಿದೆ ಎಂದರು.

ತಾಲೂಕಿನ ಹಿರೇಬಳ್ಳೇಕೆರೆ ಗ್ರಾಮದಲ್ಲಿ 12 ಲಕ್ಷ ರೂ. ವೆಚ್ಚದ ಶುದ್ಧಗಂಗಾ ನೀರಿನ ಘಟಕಕ್ಕೆ ಭೂಮಿಪೂಜೆಯನ್ನು ಚಿಕ್ಕಬಳ್ಳೇಕೆರೆ ಗ್ರಾಪಂ ಅಧ್ಯಕ್ಷ ಬಸವರಾಜ್ ನೆರವೇರಿಸಿ ಮಾತನಾಡಿ, ಬಹುದಿನಗಳ ಬೇಡಿಕೆಗೆ ಶಾಸಕರು ಸಕಾರತ್ಮಕ ಸ್ಪಂದನೆ ನೀಡಿ ಘಟಕ ನಿರ್ಮಿಸಿಕೊಡುವಲ್ಲಿ ಒತ್ತು ನೀಡಿದ್ದು, ಈ ಭಾಗದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಪುರ ಗ್ರಾಪಂ ಅಧ್ಯಕ್ಷೆ ಸುಮಾ ಮಹೇಶ್, ಉಪಾಧ್ಯಕ್ಷ ಅಶೋಕ್, ಸದಸ್ಯರಾದ ಕೊನೆಮನೆ ರವಿ, ನಾಗಮ್ಮ ಶಿವಕುಮಾರ್, ಹಾಲಪ್ಪ, ಶೇಖರಪ್ಪ, ಮಂಜಪ್ಪ. ಈಶ್ವರಪ್ಪ, ಲೋಕೇಶ್, ಮುಖಂಡರಾದ ಹಾಲಪ್ಪ, ಶೇಖರಪ್ಪ, ಮಂಜಪ್ಪ, ಮಲ್ಲೇಶಪ್ಪ, ಜಯಣ್ಣ, ಹಿರೇಬಳ್ಳೇಕೆರೆ ಗ್ರಾಮದ ಪ್ರಭು, ಕೆ. ರವಿಕುಮಾರ್, ಭೈರಸಿದ್ದಪ್ಪ, ಕೆಂಚಪ್ಪ, ಜಿ.ಕೃಷ್ಣಪ್ಪ, ಮುರುಡಪ್ಪ, ಮರುಳಪ್ಪ, ಚಂದ್ರಪ್ಪ, ಜಗದೀಶ್, ರೇವಣ್ಣ, ದಿವಾಕರ್, ಪಿಡಿಒ ಸುನೀಲ್, ಭೂಸೇನಾ ನಿಗಮದ ಎಇಇ ಅಶ್ವಿನಿ, ಗಿರೀಶ್ ಇತರರಿದ್ದರು.