ಕಾನಹೊಸಹಳ್ಳಿ: ಗ್ರಾಮೀಣ ಭಾಗದ ಜನರು ನರೇಗಾ ಯೋಜನೆಯಡಿ ಕೆಲಸ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು. ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರದಿಂದ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಹಾರಕಬಾವಿ ಗ್ರಾಮದಲ್ಲಿ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರಿಂದ ಸಮಸ್ಯೆಗಳ ಮಾಹಿತಿ ಪಡೆದು ಗುರುವಾರ ಮಾತನಾಡಿದರು. ನರೇಗಾ ದೇಶದ ಕಾರ್ಮಿಕರ ಪಾಲಿಗೆ ಮಹತ್ವದ ಯೋಜನೆಯಾಗಿದ್ದು, ಗ್ರಾಮೀಣ ಜನರಿಗೆ ವರದಾನವಾಗಿದೆ. ಕೂಲಿ ಹಣ ಹೆಚ್ಚಳ ಮಾಡಲಾಗಿದೆ ಎಂದರು.
ನರೇಗಾ ಯೋಜನೆಯನ್ನು ಮಕ್ಕಳ ವಿದ್ಯಾಭ್ಯಾಸ ಮತ್ತು ದೈನಂದಿನ ಜೀವನಕ್ಕೆ ಸಹಕಾರಿಯಾಗುವಂತೆ ಬಳಸಿಕೊಳ್ಳಬೇಕು. ಬಡವರು, ಶೋಷಿತರು, ದಲಿತ ಮತ್ತು ದಮನಿತ ಜನರಿಗೆ ಕೂಲಿ ನೀಡುವ ಮೂಲಕ ಯೋಜನೆ ಶಕ್ತಿ ತುಂಬಿದೆ. ಬಿಸಲಿನ ತಾಪ ಹೆಚ್ಚಾಗಿರುವುದರಿಂದ ಸರ್ಕಾರ ಕಾರ್ಮಿಕರ ಆರೋಗ್ಯದ ಕಾಳಜಿಯನ್ನೂ ವಹಿಸಿದೆ. ಈ ಹಿಂದೆ ಕೆಲಸದ ವೇಳೆ ಕಾರ್ಮಿಕರು ಮೃತಪಟ್ಟಾಗ ಅವರ ಕುಟುಂಬದವರಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ತಾಪಂ ಇಒ ನರಸಪ್ಪ, ಗ್ರಾಪಂ ಅಧ್ಯಕ್ಷೆ ಬಸಮ್ಮ ಮಂಜುನಾಥ, ಉಪಾಧ್ಯಕ್ಷೆ, ರತ್ನಮ್ಮ ಮಲ್ಲೇಶ್, ಪಿಡಿಒ ಈರಣ್ಣ, ತಾಪಂ ಮಾಜಿ ಸದಸ್ಯ ಎಸ್.ಶೇಖರಪ್ಪ, ಗ್ರಾಪಂ ಸದಸ್ಯರಾದ ಡಿ.ಶೇಖರಪ್ಪ, ಕೋಟಿಲಿಂಗನಗೌಡ, ಮೂಗಪ್ಪ, ಮುನಿಯಪ್ಪ, ಕಾಯಕಮಿತ್ರೆ ಮೂಗಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ರೇಖಾ, ಸಮುದಾಯ ಆರೋಗ್ಯ ಕೇಂದ್ರದ ಸುರೇಶ್, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮದ ಪ್ರಮುಖರು ಇದ್ದರು.