ಜಿಲ್ಲೆ

ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ

ವಿರಾಜಪೇಟೆ: ಗ್ರಾಮೀಣ ಮಟ್ಟದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಡುವ ಅಗತ್ಯತೆ ಇದೆ ಎಂದು ಆರ್ಜಿ ಗ್ರಾಮದ ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯ ಪ್ರಾಂಶುಪಾಲೆ ಮಮತಾ ಹೇಳಿದರು.


ಜಿಲ್ಲಾ ಪಂಚಾಯಿತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಿರಾಜಪೇಟೆ ತಾಲೂಕು ಪಂಚಾಯಿತಿ, ಆರ್ಜಿ ಗ್ರಾಮ ಪಂಚಾಯಿತಿಯಿಂದ ಶಾಲೆಯಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಯಾಗಿ ಕ್ರೀಡೆಯನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಕ್ರೀಡೆಯಿಂದ ಮಾನಸಿಕ, ದೈಹಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಕೊಡಗು ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹಲವು ಆಟಗಾರರನ್ನು ನೀಡಿದೆ ಎಂದು ಹೇಳಿದರು.


ಗ್ರಾಪಂ ಅಧ್ಯಕ್ಷೆ ಎಚ್.ಬಿ.ಪಾರ್ವತಿ, ಉಪಾಧ್ಯಕ್ಷ ಉಪೇಂದ್ರ, ಕಾರ್ಯದರ್ಶಿ ಆರ್.ರಾಜನ್, ಪಿಡಿಒ ಮಣಿ, ಸದಸ್ಯರಾದ ಕೆ.ಟಿ.ಬಶೀರ್ ಇದ್ದರು. ಹಾಕಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಪೊನ್ನಂಪೇಟೆಯ ಸಾಯಿ ಕ್ರೀಡಾ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕೀತಿಯಂಡ ಪೂರ್ವಿಕ ಪೂವಮ್ಮ ಅವರನ್ನು ಸನ್ಮಾನಿಸಲಾಯಿತು.