ಬಾಗಲಕೋಟೆ: ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಲಭ್ಯಗಳನ್ನು ಅಽಕ ಮಟ್ಟದಲ್ಲಿ ಮಾಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಚುನಾವಣಾ ಪ್ರಚಾರಾರ್ಥವಾಗಿ ಮತಕ್ಷೇತ್ರ ವ್ಯಾಪ್ತಿಯ ಶೀಗಿಕೇರಿ ಹಾಗೂ ಬೇವಿನಮಟ್ಟಿ ಗ್ರಾಮದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಒಳಚರಂಡಿ ನಿರ್ಮಾಣ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲಾಗಿದೆ. ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತದಾನ ಮಾಡಿ ಹೆಚ್ಚಿನ ಸಂಖ್ಯೆಯ ಮತಗಳಿಂದ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಶೀಗಿಕೇರಿ ಗ್ರಾಮದಲ್ಲಿ ೪೦ ಲಕ್ಷ ರೂ.ವೆಚ್ಚದಲ್ಲಿ ಗ್ರಾಪಂ ಕಚೇರಿ ಕಟ್ಟಡ ನಿರ್ಮಾಣ, ೧ ಕೋಟಿ ರೂ.ವೆಚ್ಚದಲ್ಲಿ ಸಿಕ್ಕೇರಿ ಎನ್‌ಎಚ್೩೬೭ ರಸ್ತೆ ನಿರ್ಮಾಣ, ೪೦ ವೆಚ್ಚದಲ್ಲಿ ಜಲಜೀವನ ಮೀಷನ್ ಯೋಜನೆಯಡಿ ಮನೆಮನೆಗೆ ಶುದ್ಧಕುಡಿಯುವ ನೀರು ಪೂರೈಕೆ, ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ೫೦ ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ೩೨ ಲಕ್ಷ ರೂ.ವೆಚ್ಚದಲ್ಲಿ ಘನ, ದ್ರವತ್ಯಾಜ್ಯ ನಿರ್ವಹಣಾ, ಸಂಗ್ರಹಣಾ ಘಟಕವನ್ನು ನಿರ್ಮಾಣ ಮಾಡಲಾಗಿದೆ. ೧.೨೦ ಕೋಟಿ ರೂ.ವೆಚ್ಚದಲ್ಲಿ ಶೀಗಿಕೇರಿಯಿಂದ ಯಳ್ಳಿಗುತ್ತಿ ಹೊಲದ ವರೆಗೆ ರಸ್ತೆ ನೀಡಲಾಗಿದೆ ಎಂದರು.
ಬೇವಿನಮಟ್ಟಿ ಗ್ರಾಮದಲ್ಲಿ ೨೫ ಲಕ್ಷ ರೂ,ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ೩ ಕೊಠಡಿ ನಿರ್ಮಾಣ ಮಾಡಲಾಗಿದೆ. ೪೦ ಲಕ್ಷ ವೆಚ್ಚದಲ್ಲಿ ಬೇವಿನಮಟ್ಟಿಯಿಂದ ಹಳೆಬಾಗಲಕೋಟೆ ರಸ್ತೆ ನಿರ್ಮಾಣ ಮಾಡಲಾಗಿದೆ. ೧.೨೦ ಕೋಟಿ ರೂ. ವೆಚ್ಚದಲ್ಲಿ ಆರ್‌ಎಂಎಸ್‌ಎ ಶಾಲೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ೬೦ ಲಕ್ಷ ರೂ.ವೆಚ್ಚದಲ್ಲಿ ಬೇವಿನಮಟ್ಟಿಯಿಂದ ಮಲ್ಲಾಪುರ ಆರ್‌ಸಿ ರಸ್ತೆ ಸುಧಾರಣೆ ಮಾಡಲಾಗಿದೆ, ಅನೇಕ ಫಲಾನುಭವಿಗಳಿಗೆ ಗಂಗಾಕಲ್ಯಾಣ ಯೋಜನೆಯಡಿ ಬೋರವೆಲ್ಲ ಕೊರೆಸಲಾಗಿದೆ. ಸಾಲಸೌಲಭ್ಯಗಳನ್ನು ನೀಡಲಾಗಿದೆ ಎಂದು ಅವರು ವಿವರಣೆ ನೀಡಿದರು.
ಬಾಗಲಕೋಟೆ ಕ್ಷೇತ್ರದ ಉಸ್ತುವಾರಿ, ಬಿಹಾರದ ಶಾಸಕ ಸಂಜಯಕುಮಾರ ಸಿಂಗ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ರಾಜಶೇಖರ ಮುದೇನೂರ, ಗ್ರಾಮೀಣ ಮಂಡಳ ಅಧ್ಯಕ್ಷ ಸುರೇಶ ಕೊಣ್ಣೂರ, ಪ್ರಧಾನ ಕಾರ್ಯದರ್ಶಿ ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಬಿಜೆಪಿ ಮುಖಂಡರಾದ ನಾಗಪ್ಪ ಕೆರೂರ, ಬಸವರಾಜ ಲೋಕಾಪುರ, ಮಲ್ಲಪ್ಪ ಮೇಟಿ, ದುಂಡಪ್ಪ ದೇಸಾಯಿ ಸೇರಿದಂತೆ ಇತರರು ಇದ್ದರು.