ಕೈಲಾಂಚ : ನರೇಗಾ ಯೋಜನೆ ಲಾಭ ಪಡೆಯಲು ಗ್ರಾಪಂ ನಡೆಸುವ ವಾರ್ಡ್‌ಸಭೆ, ಗ್ರಾಮಸಭೆಗಳಲ್ಲಿ ಸಂಬಂಧಪಟ್ಟ ಕೆಲಸಗಳ ಕ್ರಿಯಾ ಯೋಜನೆ ಮಾಡಿಸಿ ಯೋಜನೆಯ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಗ್ರಾಪಂ ಅಧ್ಯಕ್ಷ ಬಿ.ಸಿ. ಹೇಮಂತ್‌ಕುಮಾರ್ ತಿಳಿಸಿದರು.
ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ಶಿವನಹಳ್ಳಿ ವಡ್ಡರದೊಡ್ಡಿ ಗ್ರಾಮದ ಮುನೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿ, ನರೇಗಾ ಯೋಜನೆ ಗ್ರಾಮೀಣಭಿವೃದ್ಧಿಗೆ ವರದಾನವಾಗಿದೆ. ಕೃಷಿ ಅಭಿವೃದ್ಧಿಗೆ ಪೂರಕವಾಗುವ ಕೃಷಿಹೊಂಡ, ಕೆರೆ ಕುಂಟೆ ರಕ್ಷಣೆ, ಜಲಮೂಲ ಅಭಿವೃದ್ಧಿಗೆ ಗ್ರಾಮದ ರಸ್ತೆ, ಚರಂಡಿ, ದನದಕೊಟ್ಟಿಗೆ, ಬದು ನಿರ್ಮಾಣ ಮಾಡಲು ನರೇಗಾ ಯೋಜನೆ ಸೌಲಭ್ಯ ನೀಡುತ್ತದೆ ಎಂದರು.
ತಾಪಂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ರೂಪೇಶ್‌ಕುಮಾರ್ ಮಾತನಾಡಿ, ಗ್ರಾಪಂಗಳು ಜನಸ್ನೇಯಿಯಾಗಿದ್ದು, ನರೇಗಾ ಯೋಜನೆ ಯಶಸ್ವಿ ಅನುಷ್ಠಾನ ಮಾಡಲಾಗುತ್ತಿದೆ. ವೈಯಕ್ತಿಕ ಸಮುದಾಯ ಕಾಮಗಾರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ನರೇಗಾ ಯೋಜನೆಯಲ್ಲಿ ಅಂತರ್ಜಲ ರಕ್ಷಣೆಗೆ ಒತ್ತು ನೀಡಲಾಗಿದೆ. ಕೆರೆ, ಕುಂಟೆ, ಕಾಲುವೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ಗ್ರಾಪಂನಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ಕಾಲಕಾಲಕ್ಕೆ ವಾರ್ಡ್‌ಸಭೆ, ಗ್ರಾಮಸಭೆಗಳ ಮೂಲಕ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಗ್ರಾಪಂಗಳು ಮಾಡುತ್ತಿವೆ ಎಂದರು.
ರೇಷ್ಮೆ ಅಧಿಕಾರಿ ಬಸವರಾಜು, ಪಶು ಆಸ್ಪತ್ರೆ ಬನ್ನಿಕುಪ್ಪೆ ಅಧಿಕಾರಿ ಸುನಿತಾ, ನಂಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೇಣುಕಾಪ್ರಸಾದ್, ಬನ್ನಿಕುಪ್ಪೆ ಆಸ್ಪತ್ರೆ ವೈದ್ಯೆ ಡಾ ಧನಲಕ್ಷ್ಮೀ, ಆಸ್ಪತ್ರೆ ಅಧಿಕಾರಿಗಳಾದ ಪುಟ್ಟಸ್ವಾಮಿಗೌಡ, ಸೋಮಶೇಖರ್, ರಾಜೇಂದ್ರ, ಸದಸ್ಯರಾದ ರಾಜಮ್ಮ, ಚಂದ್ರಗಿರಿ, ಆರ್. ಮೂರ್ತಿನಾಯಕ್, ಕುಮಾರ್, ಯಶೋಧಮ್ಮ, ಪೂರ್ಣಿಮಾ ಶಿವಮೂರ್ತಿ, ನವೀನ್‌ಕುಮಾರಿ ನಾಗರಾಜು, ಮುಖಂಡ ವಿಷಕಂಠಯ್ಯ ಇದ್ದರು.