ಜಿಲ್ಲೆ

ಗ್ರಾಮೀಣ ಅಂಚೆ ನೌಕರರನ್ನು ಕಾಯಂ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ಹಾಸನ: ಈ ಕೂಡಲೇ ಗ್ರಾಮೀಣ ಅಂಚೆ ನೌಕರರನ್ನು ಕಾಯಂ ಮಾಡುವಂತೆ ಹಾಗೂ ಕಮಲೇಶನ್ ಸಮಿತಿ ಶಿಪಾರಸ್ಸು ಮಾಡಿರುವ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಗರದ ಸಿಟಿ ಬಸ್ ನಿಲ್ದಾಣ ಬಳಿ ಇರುವ ಮುಖ್ಯ ಅಂಚೆ ಕಚೇರಿ ಮುಂದೆ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವತಿಯಿಂದ ಮಂಗಳವಾರ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಯಿತು.
ಇದೇ ಸಂದರ್ಭದಲ್ಲಿ ಎಐಜಿಡಿಎಸ್‌ಯು ಸಂಘಟನೆಯ ಕಾರ್ಯದರ್ಶಿ ಕೆ.ಜೆ. ಶಿವಾಜಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮೀಣ ಅಂಚೆ ನೌಕರರನ್ನು ಕಾಯಂ ಮಾಡುವಂತೆ ಹಾಗೂ ಕಮಲೇಶನ್ ಸಮಿತಿ ಶಿಪಾರಸ್ಸು ಮಾಡಿರುವ ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಮೀಣ ಅಂಚೆ ನೌಕರರು, ಎಐಜಿಡಿಎಸ್‌ಯು ಹಾಗೂ ಎನ್‌ಯುಜಿಡಿಎಸ್ ಸದಸ್ಯರಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಗಿದೆ ಎಂದರು.
ನಮ್ಮ ಪ್ರಮುಖ ಬೇಡಿಕೆಗಳೆಂದರೇ 8 ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲ ಸವಲತ್ತಗಳನ್ನು ಒದಗಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ 12-24-36 ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಇಂಕ್ರೀಮೆಂಟ್ ನೀಡಲು ಗಮನವಹಿಸಬೇಕು. ಅವೈಜ್ಞಾನಿಕ ಗುರಿ ನೀಡಿ ಮೇಳಗಳನ್ನು ನಡೆಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಗುಂಪು ಇನ್ಸೂರೆನ್ಸ್ ಕವರೇಜ್ ಅನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಬೇಕು ಮತ್ತು ಅವೈಜ್ಞಾನಿಕ ಗುರಿ ಸಾಧಿಸದಿರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು. ಹಾಗೆಯೇ ಜಿಡಿಎಸ್ ಗ್ರಾಚ್ಯುಟಿ ಹಣವನ್ನು 5 ಲಕ್ಷ ರೂ.ಗಳವರೆಗೆ ಹೆಚ್ಚಿಸಿ 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನಮ್ಮ ಬೇಡಿಕೆ ಆಗಿದೆ ಎಂದು ಹೇಳಿದರು.
ಇದೇ ವೇಳೆ ಎಐಜಿಡಿಎಸ್‌ಯು ಸಂಘಟನೆಯ ಅಧ್ಯಕ್ಷ ಜಿ.ಬಿ. ಕಾಳಿಗೇಗೌಡ, ಕಾರ್ಯಾಧ್ಯಕ್ಷ ಎಚ್.ಇ. ಜಯಣ್ಣ, ಸಂಘಟನಾ ಕಾರ್ಯದರ್ಶಿ ದಿನೇಶ್, ಪದಾಧಿಕಾರಿಗಳಾದ ಮಲ್ಲೇಶ್, ಸತೀಶ್, ವಾಸು, ವಿನೋದ್ ಕುಮಾರ್, ಮಧು, ಎನ್‌ಯುಜಿಡಿಎಸ್‌ಯು ನ ವಲಯ ಕಾರ್ಯದರ್ಶಿ ಇತರರು ಭಾಗವಹಿಸಿದ್ದರು.