ಜಿಲ್ಲೆ

ಗ್ರಾಮೀಣ ಭಾಗದಲ್ಲಿ ವಸತಿಯುತ ಶಿಕ್ಷಣಕ್ಕೆ ಆದ್ಯತೆ

ಹಾವೇರಿ: ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗಗಳಲ್ಲಿನ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಸರ್ಕಾರ ಗ್ರಾಮೀಣ ಭಾಗದಲ್ಲಿ ವಸತಿಯುತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿಯುತ ಪ್ರಥಮ ದರ್ಜೆ ಕಾಲೇಜ್ ಕಟ್ಟಡ ನಿರ್ವಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಸತಿಯುತ ಕಾಲೇಜ್ ಕಟ್ಟಡವನ್ನು 23 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗುತ್ತಿದೆ. ಪ್ರತಿವರ್ಷ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೂ ಸೇರಿ 120 ವಿದ್ಯಾರ್ಥಿಗಳಂತೆ 3 ವರ್ಷದ ತರಗತಿಯಲ್ಲಿ ಒಟ್ಟು 360 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ಕಟ್ಟಡಗಳನ್ನು ನಿರ್ವಿುಸಲಾಗುವುದು ಎಂದರು.

ಗ್ರಾಮೀಣ ಭಾಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ವಿದ್ಯಾರ್ಥಿಗಳು ಕೆಲ ಹಂತದಲ್ಲಿ ವಿವಿಧ ಕಾರಣಗಳಿಗಾಗಿ ವ್ಯಾಸಂಗ ಅರ್ಧದಲ್ಲೇ ನಿಲ್ಲಿಸುತ್ತಾರೆ. ಇಂತಹ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಬೇಕು ಎಂಬ ಕಾರಣಕ್ಕೆ ಸರ್ಕಾರ ಗ್ರಾಮೀಣ ಭಾಗಗಳಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸುವುದಕ್ಕೆ ಮುಂದಾಗಿದೆ. ಈ ವಸತಿ ಶಾಲೆಯಲ್ಲಿ ಪಜಾ, ಪಪಂ ವಿದ್ಯಾರ್ಥಿಗಳಿಗೆ ಶೇ. 60 ಹಾಗೂ ಇತರ ಸಮುದಾಯದ ವಿದ್ಯಾರ್ಥಿಗಳಿಗೆ ಶೇ. 40ರಷ್ಟು ಅವಕಾಶ ಕಲ್ಪಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸವಣೂರ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ 22 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ವಿುಸುತ್ತಿರುವ ಇಂದಿರಾ ಗಾಂಧಿ ವಸತಿ ಶಾಲೆಯ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಕಡಕೋಳ ಗ್ರಾಮದಲ್ಲಿ 47 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ವಿುಸಿರುವ ಪಶು ಚಿಕಿತ್ಸಾ ಕೇಂದ್ರ ಉದ್ಘಾಟಿಸಲಾಯಿತು.

ಪ್ರಾಚಾರ್ಯ ಡಾ. ರಮೇಶ ತೆವರಿ, ಸವಣೂರ ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ, ಉಪಾಧ್ಯಕ್ಷೆ ಸುವರ್ಣ ಸುಕಳಿ, ಜಿಪಂ ಮಾಜಿ ಸದಸ್ಯ ಕೃಷ್ಣ ಸುಣಗಾರ, ಸಿದ್ದಪ್ಪ ಗುಂಜಾಳ, ವಿ.ಆರ್. ಪಾಟೀಲ, ಬಸವರಾಜ ಡೂಂಕಣ್ಣನವರ, ನಾಗರಾಜ ಬಸೇಗಣ್ಣಿ, ಉಡಚಪ್ಪ ತಳವಾರ, ಸುರೇಶ ಗುಜರಿ, ಭಗವಂತಗೌಡ ಪಾಟೀಲ, ಶಂಕ್ರಪ್ಪ ದೊಡ್ಡಮನಿ, ನಾಗರಾಜ ದೊಡ್ಡಮನಿ, ಚೆನ್ನಬಸಣ್ಣ ಗುಡಗೂರ, ಫಕ್ಕಿರೇಶ ಕಾಳಿ, ಮಂಜುನಾಥ ಖ್ಯಾತಣ್ಣನವರ, ಸಿ.ಬಿ. ಪಾಟೀಲ, ಗಿರೀಶ ತುಪ್ಪದ, ಜಗದೀಶ ಮಲಗೋಡ ಇತರರಿದ್ದರು.