ಜಿಲ್ಲೆ

ಗ್ರಾಮಾಡಳಿತಾಧಿಕಾರಿ ನೇಮಕಾತಿ ಪರೀಕ್ಷೆ 26, 27ಕ್ಕೆ

ಚಿತ್ರದುರ್ಗ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಯಲಿರುವ ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯ ಯಾವ ಲೋಪವಾಗದಂತೆ ಪಾರದರ್ಶಕವಾಗಿರಲಿ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಪರೀಕ್ಷಾ ಸಿದ್ಧತೆ ಸಂಬಂಧ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದರು. ಪರೀಕ್ಷೆಗೆ 14,253 ಅಭ್ಯರ್ಥಿಗಳು ನೋಂದಾಯಿಸಿದ್ದು, ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ಚಳ್ಳಕೆರೆ ನಗರ ಸೇರಿ ಒಟ್ಟು 38 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಅ. 26ರಂದು ಕಡ್ಡಾಯ ಕನ್ನಡ ಪತ್ರಿಕೆ-2, 27ರಂದು ಮುಖ್ಯ ಪರೀಕ್ಷೆಯ ಪತ್ರಿಕೆ-1 ಹಾಗೂ ಪತ್ರಿಕೆ-2ರ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜೆರಾಕ್ಸೃ್, ಕಂಪ್ಯೂಟರ್-ಇಂಟರ್‌ನೆಟ್ ಕೇಂದ್ರಗಳು ಮುಚ್ಚಬೇಕು. ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಉಪಕರಣ ತರುವಂತಿಲ್ಲ. ಇದಕ್ಕೆ ಉಪನ್ಯಾಸಕರು, ಕಚೇರಿ ಸಿಬ್ಬಂದಿ ಕೂಡ ಹೊರತಲ್ಲ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಕೆಇಎ ನಿರ್ದೇಶನಕ್ಕೆ ಕಾಯದೆ ಎಲ್ಲ ಕೊಠಡಿಗಳಲ್ಲೂ ತಪ್ಪದೆ, ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪಿಯುಡಿಡಿ ಪುಟ್ಟಸ್ವಾಮಿ, ಡಿಡಿಪಿಐ ಮಂಜುನಾಥ್, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಇತರರಿದ್ದರು.