ಜಿಲ್ಲೆ

ಗ್ರಾಮಾಂತರ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಆದ್ಯತೆ

ಗುಂಡ್ಲುಪೇಟೆ: ತಾಲೂಕಿನ ಗ್ರಾಮಾಂತರ ಪ್ರದೇಶಗಳ ರಸ್ತೆಗಳನ್ನು ಕೋಟ್ಯಂತರ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ತಾಲೂಕಿನ ಬೆರಟಹಳ್ಳಿ ಗ್ರಾಮದಲ್ಲಿ ಗುರುವಾರ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಶಿಷ್ಟ ಜನಾಂಗಗಳ ಬೀದಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಲು ಕಳೆದ 10 ವರ್ಷಗಳಿಗಿಂತ ಮೂರು ಪಟ್ಟು ಅನುದಾನ ತರಲಾಗಿದೆ. ಹೊಸ ಪವರ್ ಸ್ಟೇಷನ್ ಹಾಗೂ ನಿರಂತರ ಜ್ಯೋತಿ ವ್ಯಾಪ್ತಿಯಿಂದ ಹೊರಗಿದ್ದ 38 ಗ್ರಾಮಗಳನ್ನು ಸೇರಿಸಿ ದಿನದ 24 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದರು.
34 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು, ಪಟ್ಟಣಕ್ಕೆ ಪ್ರತ್ಯೇಕ ಎಕ್ಸ್‌ಪ್ರೆಸ್ ಲೈನ್, ತೆರಕಣಾಂಬಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಣ, ಮುಚ್ಚಿ ಹೋಗಿದ್ದ ಪದವಿ ಕಾಲೇಜನ್ನು ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿಸಿ ಪುನರಾರಂಭ, ಬೊಮ್ಮನಹಳ್ಳಿಯಲ್ಲಿ ಅಂಬೇಡ್ಕರ್ ವಸತಿಶಾಲೆ ನಿರ್ಮಾಣ, 35 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಾಗುವಳಿ ಪತ್ರ ವಿತರಣೆ, ವಸತಿ ಯೋಜನೆಯಡಿ ಬೊಮ್ಮಲಾಪುರ ಮತ್ತು ಮಳವಳ್ಳಿ ಗ್ರಾಮಗಳಲ್ಲಿ ನೂರಾರು ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಲಾಗಿದೆ ಎಂದರು.
ಬಲಚವಾಡಿ ಗ್ರಾಪಂ ಅಧ್ಯಕ್ಷ ನಂಜಪ್ಪ, ಸದಸ್ಯರಾದ ಮಂಜುಳಾ, ಸುಮಾ, ನಿವೃತ್ತ ಶಿಕ್ಷಕ ಗುರುಸ್ವಾಮಿ, ಮುಖಂಡರಾದ ಬಿ.ಜಿ.ಗುರುದೇವಪ್ರಸಾದ್, ಶಿವಮಲ್ಲಪ್ಪ, ಗುರುಸ್ವಾಮಿ, ಕುಮಾರಸ್ವಾಮಿ, ಬಿ.ಎಸ್.ಮಹೇಶ್, ತಾಪಂ ಮಾಜಿ ಸದಸ್ಯ ಸಿ.ಮಹದೇವಪ್ರಸಾದ್, ಚಾಮುಲ್ ಮಾಜಿ ನಿರ್ದೇಶಕ ಕಣ್ಣೇಗಾಲಸ್ವಾಮಿ, ಎಸ್.ಸಿ.ಮಂಜುನಾಥ್ ಹಲವರು ಇದ್ದರು.
ಗುಂಡ್ಲುಪೇಟೆ: ತಾಲೂಕಿನ ಗುರುವಿನಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಶಾಸಕ ನಿರಂಜನಕುಮಾರ್ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಸದಸ್ಯ ರಘು, ಶೇಖರದೇವರು, ಮುಖಂಡರಾದ ಮುತ್ತಣ್ಣ, ಜಿ.ವಿ.ಶಿವಪ್ಪ, ಗುರುಪ್ರಸಾದ್ ಇತರರು ಇದ್ದರು.