ಜಿಲ್ಲೆ

ಗ್ರಾಮಸ್ಥರು ಪ್ರೀತಿ, ಸಹಕಾರ ಮರೆಯಲಾರೆ

ಯಾದಗಿರಿ: ವಡಿಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಶಂಕ್ರಪ್ಪ ನಗಿಮುಖ ವರ್ಗಾವಣೆಯಾದ ನಿಮಿತ್ತ ಶಾಲೆಯ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಂದ ಬುಧವಾರ ಹೃದಯಸ್ಪಸ್ಪರ್ಶಿಯಾಗಿ ಬೀಳ್ಕೊಡಲಾಯಿತು.

ಕಳೆದ 20 ವರ್ಷಗಳಿಂದ ಶಿಕ್ಷಕ ಶಂಕ್ರಪ್ಪ ಅತ್ಯುತ್ತಮ ಸೇವೆ ಸಲ್ಲಿಸುವ ಮೂಲಕ ಗ್ರಾಮಸ್ಥರ ಮನ ಗೆದ್ದಿದ್ದಾರೆ. ಶಿಸ್ತು, ಸಮಯ ಪಾಲನೆ, ವಿದ್ಯಾಭ್ಯಾಸ, ಆಟ ಪಾಠ ಪ್ರವಚನ, ಹಿರಿಯರನ್ನು ಗೌರವಿಸುವುದು ಎಲ್ಲವನ್ನು ಮಕ್ಕಳಿಗೆ ಹೇಳಿ ಕೊಡುತ್ತಿದ್ದರು.

ಹೋಬಳಿ, ತಾಲೂಕು ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಮಕ್ಕಳು ಭಾಗವಹಿಸಲು ಉತ್ತಮ ಕ್ರೀಡಾ ತರಬೇತಿ ನೀಡುತ್ತಿದ್ದರು. ಶಾಲೆಯ ಮಕ್ಕಳನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಹೀಗಾಗಿಯೇ ಮಕ್ಕಳಿಗೆ ಶಿಕ್ಷಕ ಶಂಕ್ರಪ್ಪ ನಗಿಮುಖ ಬಹಳ ಅಚ್ಚುಮೆಚ್ಚು ಎಂದು ಗ್ರಾಮಸ್ಥರು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಕ್ರಪ್ಪ, ಗ್ರಾಮಸ್ಥರ ಸಹಕಾರ, ಶಾಲೆಯ ಶಿಕ್ಷಕರ ಸಲಹೆ ಹಾಗೂ ಮೇಲಧಿಕಾರಿಗಳ ಮಾರ್ಗದರ್ಶನದಿಂದ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ನಾಯ್ಕಲ್ ಗ್ರಾಮದ ಜನರ ಮತ್ತು ವಿದ್ಯಾರ್ಥಿಗಳ ಪ್ರೀತಿ ಎಂದಿಗೂ ಮರೆಯಲಾರೆ ಎಂದು ಭಾವುಕರಾದರು.