ನವಲಗುಂದ: ತಾಲೂಕಿನ ಮೊರಬ ಗ್ರಾಮದಿಂದ ಶಿರಕೋಳ ಗ್ರಾಮಕ್ಕೆ ವ್ಯಾಪಿಸಿದ ಕರೊನಾ ಸೋಂಕಿನಿಂದ ಭಯ ಭೀತರಾಗಿದ್ದ ಗ್ರಾಮಸ್ಥರಿಗೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಆತ್ಮಸ್ಥೈರ್ಯ ತುಂಬಿದರು.
ತಾಲೂಕಾಡಳಿತ ಅಧಿಕಾರಿಗಳೊಂದಿಗೆ ಶಿರಕೋಳ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಅವರು, ಗ್ರಾಮದಲ್ಲಿ ಕರೊನಾ ಕಾಣಿಸಿದ ಹಿನ್ನೆಲೆಯಲ್ಲಿ ಸೀಲ್ಡೌನ್ ಮಾಡಿದ ಪ್ರದೇಶದಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿದರು. ನಿವಾಸಿಗಳಿಗೆ ಕಲ್ಪಿಸಿದ ವೈದ್ಯಕೀಯ ವ್ಯವಸ್ಥೆ ಕುರಿತು ತಹಸೀಲ್ದಾರ್ ನವೀನ ಹುಲ್ಲೂರ, ಸಿಪಿಐ ಚಂದ್ರಶೇಖರ ಮಠಪತಿ, ಆರೋಗ್ಯ ಹಾಗೂ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ರ್ಚಚಿಸಿದರು.
ಸೀಲ್ಡೌನ್ ಪ್ರದೇಶದಲ್ಲಿ ನಿವಾಸಿಗಳು ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಕೈಗೆ ಸ್ಯಾನಿಟೈಸರ್ ಬಳಕೆ, ರಾಸಾಯನಿಕ ದ್ರಾವಣ ಸಿಂಪಡಣೆ, ಶುಚಿತ್ವ ಕೈಗೊಂಡು ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸಹಕಾರ ನೀಡಬೇಕು. ಹಾಗೆಯೇ ಅಧಿಕಾರಿಗಳು ಗ್ರಾಮದಲ್ಲಿ ಕರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಸ್ಥಳೀಯ ವೈದ್ಯರು ಕರೊನಾ ಲಕ್ಷಣಗಳು ಕಾಣಿಸಿದ ವ್ಯಕ್ತಿಗಳ ಗಂಟಲ ದ್ರವ ಮಾದರಿ ಪರೀಕ್ಷೆಗೊಳಪಡಿಸಬೇಕು. ಗ್ರಾಮಸ್ಥರಲ್ಲಿ ಕರೊನಾ ಆತಂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
ನಂತರ ಮೊರಬದ ಸೀಲ್ಡೌನ್ ಪ್ರದೇಶಕ್ಕೆ ತೆರಳಿದ ಶಾಸಕರು, ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಗ್ರಾಮವೀಗ ಶಾಂತವಾಗಿದ್ದು, ಕರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಿಎಸ್ಐ ಜಯಪಾಲ ಪಾಟೀಲ, ಆರೋಗ್ಯ ಇಲಾಖೆ, ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಇದ್ದರು.