ಜಿಲ್ಲೆ

ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ ವಾಪಸ್


ವಿಜಯವಾಣಿ ಸುದ್ದಿಜಾಲ ತೂಬಗೆರೆ
ಅರಣ್ಯ ಇಲಾಖೆ ದಬ್ಬಾಳಿಕೆ ಖಂಡಿಸಿ ಈ ಬಾರಿ ಚುನಾವಣೆ ಬಹಿಷ್ಕರಿಸುವುದಾಗಿ ೋಷಿಸಿದ್ದ ಕೆಳಗಿನನಾಯಕರಾಂಡಹಳ್ಳಿ ಗ್ರಾಮಸ್ಥರು ಅಧಿಕಾರಿಗಳ ಸಂಧಾನದ ಬಳಿಕ ಬಹಿಷ್ಕಾರ ನಿರ್ಧಾರವನ್ನು ಹಿಂಪಡೆದಿದ್ದಾರೆ.
ಭಾನುವಾರ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಎನ್.ತೇಜಸ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಸ್ಥರ ಅಹವಾಲು ಆಲಿಸಿತು. ಗ್ರಾಮದ ಸರ್ವೇ ನಂ.8 ರಲ್ಲಿ ಅರಣ್ಯ ಇಲಾಖೆ ಹೊರತುಪಡಿಸಿದ ಜಾಗದಲ್ಲಿ 50ಕ್ಕೂ ಹೆಚ್ಚು ಮಂದಿ ಉಳುಮೆ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆ ನೀಡಿರುವ ಸಾಗುವಳಿ ಚೀಟಿಯೂ ಇದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಭೂಮಿ ನೀಡಲು ಸಾಧ್ಯವಾಗದಿದ್ದರೆ ಗ್ರಾಮದ ಎಲ್ಲರಿಗೂ ದಯಾಮರಣಕ್ಕೆ ಅವಕಾಶ ನೀಡಿ ಎಂದು ಗ್ರಾಮದ ಕೆಲವರು ಅಲವತ್ತುಗೊಂಡರು.
ಮುಖಂಡರಾದ ಕೃಷ್ಣನಾಯಕ, ಎನ್.ಪ್ರಸಾದ್, ರಾಜಾರಾಮನಾಯಕ, ಎಸ್.ಎಸ್.ಘಾಟಿ ಗ್ರಾ.ಪಂ. ಅಧ್ಯಕ್ಷ ಭಾರತಿಬಾಯಿ ಅಲವತ್ತುಕೊಂಡರು.

ಎಸಿ ಭರವಸೆ:ಈ ವೇಳೆ ರೈತರ ದೂರಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಪ್ರತಿಕ್ರಿಯೆ ಪಡೆದ ಎಸಿ ತೇಜಸ್‌ಕುಮಾರ್ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿರುವ ಪ್ರಕರಣ ಜೂನ್ ತಿಂಗಳಲ್ಲಿ ವಿಚಾರಣೆಗೆ ಬರಲಿದೆ. ಚುನಾವಣೆ ಮುಗಿದ ಬಳಿಕ ಕಂದಾಯ ಹಾಗೂ ಅರಣ್ಯ ಇಲಾಖೆ ನೇತೃತ್ವದಲ್ಲಿ ಜಂಟಿಸರ್ವೇ ನಡೆಸಬೇಕು. ಅಲ್ಲಿಯವರೆಗೆ ಯಾವ ಅಧಿಕಾರಿಗಳು ರೈತರಿಗೆ ತೊಂದರೆ ನೀಡಬಾರದು. ವಿವಾದವನ್ನು ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಿ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದರು.
ಉಗ್ರ ಹೋರಾಟದ ಎಚ್ಚರಿಕೆ: ಉಪವಿಭಾಗಾಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಅವರ ಮಾತಿಗೆ ಒಪ್ಪಿ ಬಹಿಷ್ಕಾರ ಹಿಂಪಡೆದಿದ್ದೇವೆ. ಒಂದು ವೇಳೆ ಭರವಸೆ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮದ ಮುಖಂಡ ಎನ್.ಪ್ರಸಾದ್ ಹೇಳಿದರು.