ಜಿಲ್ಲೆ

ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವ ಭರವಸೆ

ಹನೂರು: ತಾಲೂಕಿನ ದಂಟಳ್ಳಿ ಗ್ರಾಮಕ್ಕೆ ಸೋಮವಾರ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿ ಪರಿಹರಿಸುವ ಸಂಬಂಧ ಅಗತ್ಯ ಭರವಸೆ ನೀಡಿದರು.

ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಸಮೀಪದಲ್ಲಿಯೇ ಕಾವೇರಿ ನದಿ ಹರಿಯುತ್ತಿದೆ. ಆದರೆ ಗ್ರಾಮಕ್ಕೆ ಉಪಯೋಗವಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಹಾಗಾಗಿ ಶಾಶ್ವತ ಯೋಜನೆಯನ್ನು ರೂಪಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜಮೀನಿಗೆ ನುಗ್ಗಿ ಫಸಲನ್ನು ನಾಶಪಡಿಸುತ್ತಿವೆ. ಆದ್ದರಿಂದ ಕಾಡು ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟ ಜಾನುವಾರುಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕು. ಗ್ರಾಮದಲ್ಲಿ ಹಲವು ದಶಕದಿಂದಲೂ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಹಲವು ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಹಕ್ಕುಪತ್ರ ನೀಡಿಲ್ಲ. ಇದರಿಂದ ಸರ್ಕಾರದಿಂದ ಸಿಗುವ ಸವಲತ್ತಿನಿಂದ ವಂಚಿತರಾಗಿದ್ದು, ತುಂಬ ತೊಂದರೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಸಾಗುವಳಿ ಜಮೀನುಗಳಿಗೆ ಹಕ್ಕುಪತ್ರ ಕೊಡಿಸಬೇಕು. ಕಾವೇರಿ ನದಿ ದಡದಲ್ಲಿರುವ ದಬ್ಬಗೂಳಿ ಶ್ರೀ ಬಸವೇಶ್ವರ ಸ್ವಾಮಿ ದೇಗುಲಕ್ಕೆ ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಂದ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದ್ದರಿಂದ ಸಮರ್ಪಕ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ಶಾಸಕರಿಂದ ಭರವಸೆ: ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಕುಡಿಯುವ ನೀರು ಒದಗಿಸುವ ಸಂಬಂಧ ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ನೀಡಲಾಗುವುದು. ಸರ್ಕಾರ ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆ ನಿರ್ಮಿಸಿ ಕೊಡಲಾಗುವುದು. ಕಾಡು ಪ್ರಾಣಿಗಳಿಗೆ ಕಡಿವಾಣ ಹಾಗೂ ಸೂಕ್ತ ಪರಿಹಾರ ನೀಡುವ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಹಕ್ಕುಪತ್ರ ನೀಡುವ ಸಂಬಂಧ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಶಾಸಕರು ಗ್ರಾಮದ ಮಹದೇಶ್ವರಸ್ವಾಮಿ ಹಾಗೂ ಕಾವೇರಿ ನದಿ ದಡದಲ್ಲಿರುವ ದಬ್ಬಗೂಳಿ ಶ್ರೀ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪಿಎಸಿಸಿ ನಿರ್ದೇಶಕ ಮಂಜೇಶ್, ಮುಖಂಡರಾದ ಶಿವಣ್ಣ, ವೆಂಕಟಪ್ಪ, ಹರೀಶ್, ನಾಗರಾಜು, ಕೆಂಪರಾಜು, ಲಕ್ಷ್ಮಣ, ಮಹದೇವಪ್ಪ, ಶಿವು, ಚಿನ್ನವೆಂಕಟ, ರಂಗಶೆಟ್ಟಿ, ಕೃಷ್ಣ, ವಸಂತ, ಡಿ.ಕೆ ರಾಜು, ತಂಗವೇಲು ಇತರರು ಇದ್ದರು.