ಜಿಲ್ಲೆ

ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಜಾನುವಾರು ಕಳ್ಳರು

ಹೊನ್ನಾವರ: ರಾತ್ರಿ ಸಮಯ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ಮತ್ತು ರಸ್ತೆಗೆ ಸಮೀಪವಿರುವ ಕೊಟ್ಟಿಗೆಯೊಳಗಿನ ಗೋವುಗಳನ್ನು ಕಳವು ಮಾಡಿ ಜನರ ನಿದ್ದೆಗೆಡಿಸಿದ್ದ ಗೋವು ಕಳ್ಳರು ಶುಕ್ರವಾರ ಬೆಳಗಿನ ಜಾವ ಕೆಳಗಿನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗಳಿಯಲ್ಲಿ ಜಾನುವಾರು ಕಳ್ಳತನ ಮಾಡುತ್ತಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಭಟ್ಕಳ ಮೂಲದ ಮಹಮದ್ ಆದಿಲ್ ಡುಬ್ಬಾಳ, ಮಹಮದ್ ರಾಹೀನ್, ಮಹಮದ್ ರಾಹೀಕ್, ರಿಜ್ವಾನ್ ಅಬ್ದುಲ್ ರಶೀದ್ ಪಫಾರ್ ಬಂಧಿತ ಆರೋಪಿಗಳು. ಕಳೆದೊಂದು ವರ್ಷದಿಂದ ಕೆಳಗಿನೂರು ಭಾಗದ ಮುಗಳಿ, ಅಪ್ಸರಕೊಂಡ, ಹಕ್ಕಲಕೇರಿ, ನಾಜಗಾರ ಮುಂತಾದ ಕಡೆ ರಾತ್ರಿ ಬೆಳಗಾಗುವುದರೊಳಗಾಗಿ ಅನೇಕ ಮನೆಯ ಕೊಟ್ಟಿಗೆಯೊಳಗಿದ್ದ ಜಾನುವಾರುಗಳು ಮಾಯವಾಗುತ್ತಿದ್ದವು. ಊರವರು ಒಟ್ಟಾಗಿ ರಾತ್ರಿ ಪಾಳಿಯಲ್ಲಿ ಕಾವಲು ಕಾದರೂ ಕಳ್ಳತನ ನಿಂತಿರಲಿಲ್ಲ. ಹೇಗಾದರೂ ಮಾಡಿ ಕಳ್ಳರನ್ನು ಹಿಡಿಯಲೇಬೇಕೆಂದು ವಾರದಿಂದ ರಾತ್ರಿ ನಿದ್ದೆಗೆಟ್ಟು ಕಾದವರ ಕೈಗೆ ಶುಕ್ರವಾರ ಬೆಳಗಿನ ಜಾವ ಟವೇರಾ ಕಾರಿನಲ್ಲಿ ಬಂದು ಮುಗಳಿ ಶಾಲೆಯ ಬಳಿ ಇರುವ ಮನೆಯವರ ದನಕ್ಕೆ ಬ್ರೆಡ್ ತಿನ್ನಿಸಿ ಕಾಲನ್ನು ಕಟ್ಟುತ್ತಿದ್ದಾಗ ಕಾವಲು ಕಾಯುತ್ತಿದ್ದ ಯುವಕರು ಕಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮಂಕಿ ಠಾಣೆಯ ಪಿಎಸ್​ಐ ಪರಮಾನಂದ ಕೊಣ್ಣೂರ್, ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.