ತೆಲಸಂಗ: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಗಳ ಸುರಿಮಳೆಗೈದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಂಗನವಾಡಿಯಿಂದ ಗರ್ಭಿಣಿಯರಿಗೆ ಪೂರ್ಣ ಪ್ರಮಾಣದ ಮೊಟ್ಟೆ ನೀಡುತ್ತಿಲ್ಲ. ಊಟ ಮನೆಗೆ ವಿತರಿಸುತ್ತಿಲ್ಲ. ಊಟಕ್ಕಾಗಿ ಗರ್ಭಿಣಿ ೨ ಕಿ.ಮೀ. ನಡೆದುಕೊಂಡು ಬರಲು ಹೇಗೆ ಸಾಧ್ಯ ಎಂದು ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಗ್ರಾಮಸ್ಥರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಎಲ್ಲವನ್ನೂ ಈಗ ಮನೆಗೆ ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಕ್ರಮ ಕೈಗೊಳ್ಳಬೇಕು: ಮಾಧವಾನಂದ ನಗರ ಶಾಲೆಯ ಜಾಗ ಸರ್ವೇ ಮಾಡಿಸಿ ತಂತಿ ಬೇಲಿ ಹಾಕಬೇಕು. ವಿದ್ಯಾರ್ಥಿಗಳಿಂದ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ಅನುದಾನಿತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯಿಂದ ತೆಲಸಂಗ ಗ್ರಾಮ ವಂಚಿತವಾಗದಂತೆ ನೋಡಿಕೊಳ್ಳಬೇಕು. ಅದರ ನೀಲಿ ನಕ್ಷೆಯನ್ನು-ಫಲಕಕ್ಕೆ ಅಂಟಿಸಬೇಕು. ೨೦೧೭ರಲ್ಲಿ ಕೈಗೊಂಡ ನೀರಾವರಿ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿಸಬೇಕು. ಕುಡಿಯುವ ನೀರಿನ ಫಿಲ್ಟರ್ ದುರಸ್ತಿ ಮಾಡಬೇಕು. ಗ್ರಾಪಂ ಸದಸ್ಯರಿಗೆ ಕಾಮಗಾರಿಗಳ ಗುತ್ತಿಗೆ ನೀಡುತ್ತಿರುವ ಬಗ್ಗೆ ಜನರು ತೀವ್ರ ವಾಗ್ದಾಳಿ ನಡೆಸಿದರು.
೪ ಗಂಟೆಗೂ ಅಧಿಕ ಸಮಯ ಚರ್ಚೆ: ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಯೂರಿಯಾ ಗೊಬ್ಬರ ದೊರೆಯುತ್ತಿಲ್ಲ ಮತ್ತು ಅಂಗಡಿಯವರು ಹೆಚ್ಚು ಹಣ ಪಡೆಯುತ್ತಿದ್ದಾರೆ, ಸ್ಪಿಂಕ್ಲರ್‌ಗಳಿಗೆ ಅರ್ಜಿ ಸಲ್ಲಿಸಿದರೂ ದೊರೆಯುತ್ತಿಲ್ಲ, ಕೆಇಬಿ ಅವರು ವಿದ್ಯುತ್ ಕಂಬ ಅಳವಡಿಸುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ ಹೀಗೆ ಹತ್ತು ಹಲವು ಸಮಸ್ಯೆಗಳ ಕುರಿತು ೪ ಗಂಟೆಗಿಂತಲೂ ಅಧಿಕ ಸಮಯ ಚರ್ಚೆ ನಡೆಯಿತು.
ಉಪ ತಹಸೀಲ್ದಾರ್ ಹರೀಶ ಕುಲಕರ್ಣಿ, ಉಪ ನೋಡಲ್ ಅಧಿಕಾರಿ ರವೀಂದ್ರ ಮೂರಗಾಲಿ, ಪಿಡಿಒ ಬೀರಪ್ಪ ಕಡಗಂಚಿ ಇತರರು ಇದ್ದರು.