ಜಿಲ್ಲೆ

ಗ್ರಾಮಸಭೆಯಲ್ಲಿ ದೂರುಗಳ ಸುರಿಮಳೆ

ಹನೂರು: ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ದೂರಿನ ಸುರಿಮಳೆಗೈದರಲ್ಲದೆ, ಕೆಲ ವಿಚಾರಗಳಿಗೆ ಏರುದನಿಯ ಮಾತುಕತೆ ನಡೆದು ಸಭೆ ಗೊಂದಲದ ಗೂಡಾಯಿತು.

2023-24ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯನ್ನು ಅಧ್ಯಕ್ಷ ರುದ್ರನಾಯ್ಕ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು. ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವಿವರವನ್ನು ಸಭೆಯಲ್ಲಿ ಮಂಡಿಸಲಾಯಿತು.

ಈ ವೇಳೆ ಗ್ರಾಮಸ್ಥರಿಂದ ಕಳಪೆ ಕಾಮಗಾರಿ ಹಾಗೂ ಜೆಸಿಬಿ ಯಂತ್ರ ಬಳಕೆಯ ಬಗ್ಗೆ ಆರೋಪ ಕೇಳಿಬಂದಿತ್ತಲ್ಲದೆ, ಗ್ರಾಮದಲ್ಲಿ ಅಶುಚಿತ್ವ, ಇ-ಸ್ವತ್ತು ಪಡೆಯಲು ಹಣ ವಸೂಲಿ, ಬೀದಿ ದೀಪಗಳ ಸಮಸ್ಯೆ, ಸ್ಮಶಾನ ಸೌಕರ್ಯ ಒದಗಿಸುವಿಕೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ದೂರಿನ ಸುರಿಮಳೆಗೈದರೆ, ಸಾಮೂಹಿಕ ಶೌಚಗೃಹವನ್ನು ನಿರ್ಮಿಸುವಂತೆ ಒತ್ತಾಯಿಸಿದರು. ಇದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು.

ದೊಮ್ಮನಗದ್ದೆ ಗ್ರಾಮದ ಮಾದಪ್ಪ ಮಾತನಾಡಿ, ಗ್ರಾಮದಲ್ಲಿ 2022-23ನೇ ಸಾಲಿನಲ್ಲಿ ನಡೆದಿರುವ ಹಲವು ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ ತನಿಖೆ ನಡೆಸಬೇಕು. ಜತೆಗೆ ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಜೆಸಿಬಿ ಯಂತ್ರವನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಜನರಿಗೆ ಸಮರ್ಪಕ ಉದ್ಯೋಗ ಸಿಗುತ್ತಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಕ್ಷರ ದಾಸೋಹದ ಅಧಿಕಾರಿ ದೇವರಾಜು ಪ್ರತಿಕ್ರಿಯಿಸಿ, ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಮನಕ್ಕೆ ತಂದು ತನಿಖೆ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಅಗತ್ಯ ಮೂಲ ಸೌಕರ್ಯವಿಲ್ಲ:

ದೊಮ್ಮನಗದ್ದೆ ಗ್ರಾಮದ ರಮೇಶ್ ಮಾತನಾಡಿ, ಗ್ರಾಮದಲ್ಲಿ ಸಮರ್ಪಕ ಬೀದಿ ದೀಪ ನಿರ್ವಹಣೆ ಇಲ್ಲದ ಪರಿಣಾಮ ರಾತ್ರಿಯನ್ನು ಕತ್ತಲೆಯಲ್ಲಿ ಕಳೆಯಬೇಕಿದೆ. ಜತೆಗೆ ಚರಂಡಿಯಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಸ್ಮಶಾನ ಸೌಕರ್ಯ ಇಲ್ಲದ ಪರಿಣಾಮ ಅಗತ್ಯ ಮೂಲ ಸೌಕರ್ಯದಿಂದ ವಂಚಿತರಾಗಿದ್ದು, ತುಂಬ ತೊಂದರೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಈ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರೆ, ಅಜ್ಜೀಪುರ ಗ್ರಾಮದ ರವಿ ಮಾತನಾಡಿ, ಗ್ರಾಪಂ ಆವರಣದಲ್ಲೇ ಕಸದ ರಾಶಿ ಬಿದ್ದಿರುವುದರ ಜತೆಗೆ ಗ್ರಾಮದ ಅಲ್ಲಲ್ಲಿ ಕಸ ಸಂಗ್ರಹವಾಗಿದೆ. ಇದರಿಂದ ರಾತ್ರಿ ವೇಳೆ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ರೋಗ ರುಜಿನಗಳ ಭೀತಿ ಗ್ರಾಮಸ್ಥರಲ್ಲಿ ಆವರಿಸಿದೆ. ಇನ್ನು ಸಾಮೂಹಿಕ ಶೌಚಗೃಹ ನಿರ್ಮಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ವಹಿಸದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ವೇಳೆ ಕೆಲ ಗ್ರಾಮಸ್ಥರು ಜತೆಗೂಡಿದಾಗ ಅಧಿಕಾರಿಗಳು, ಜನಪ್ರತಿನಿಧಿಗಳ ನಡುಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪೊಲೀಸ್ ಪೇದೆ ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು.

ಪಿಡಿಒ ನಂದೀಶ್ ಮಾತನಾಡಿ, ಸಾಮೂಹಿಕ ಶೌಚಗೃಹ ನಿರ್ಮಿಸಲು ಜಾಗ ಗುರುತಿಸಲಾಗಿತ್ತು. ಆದರೆ ಕೆಲ ಕಾರಣಾಂತರದಿಂದ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು. ಜತೆಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಅಜ್ಜೀಪುರ ಗ್ರಾಮದ ಪ್ರವೀಣ್ ಇ-ಸ್ವತ್ತು ಪಡೆಯಲು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರೆ, ಅಜ್ಜೀಪುರ ಕೇಂದ್ರ ಸ್ಥಾನ. ಇಲ್ಲಿಗೆ ಸುತ್ತಮುತ್ತಲ ಗ್ರಾಮದ ಜನರು ಆಗಮಿಸುತ್ತಾರೆ. ಆದರೆ ಆಸ್ಪತ್ರೆ ಇಲ್ಲದ ಪರಿಣಾಮ ಹನೂರು ಹಾಗೂ ರಾಮಾಪುರಕ್ಕೆ ತೆರಳಬೇಕಿದ್ದು, ತುಂಬ ಸಮಸ್ಯೆಯಾಗಿದೆ. ಆದ್ದರಿಂದ ಗ್ರಾಮದಲ್ಲಿ ಆಸ್ಪತ್ರೆ ತೆರೆಯುವಂತೆ ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದರು.

ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಅಧಿಕಾರಿಗಳು ತಿಳಿಸಿದರು.