ಚನ್ನರಾಯಪಟ್ಟಣ: ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ನಿಗದಿತ ಸಮಯಕ್ಕೆ ಗ್ರಾಮಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ತಾಪಂ ಕಾರ್ಯ ನಿರ್ವಹಣಾ ಅಧಿಕಾರಿ ಹರೀಶ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಆರು ತಿಂಗಳಿಂದ ಗ್ರಾಮ ಸಭೆಗಳಾಗಿಲ್ಲ. ಹಾಗಾಗಿ ನರೇಗಾ ಸೇರಿದಂತೆ ಇತರ ಸವಲತ್ತು ನೀಡುವಲ್ಲಿ ಒಂದೇ ಪಕ್ಷದವರಿಗೆ ಮಣೆ ಹಾಕಲಾಗುತ್ತಿದೆ. ಪಿಡಿಒಗಳು ಈ ಬಗ್ಗೆ ಸೂಕ್ತ ಉತ್ತರ ನೀಡುತ್ತಿಲ್ಲ ಎಂದು ಸೋಮವಾರ ಮನವಿಯಲ್ಲಿ ವಿವರಿಸಿದ್ದಾರೆ. 15ನೇ ಹಣಕಾಸು ಯೋಜನೆ, ತೆರಿಗೆ ಹಣವನ್ನು ಕೆಲ ಪಿಡಿಒಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಸದ್ಯದಲ್ಲೇ ಈ ಕುರಿತಾಗಿ ದಾಖಲೆ ನೀಡುತ್ತೇನೆ ಎಂದು ವಿವರಿಸಿದ್ದಾರೆ.
ನರೇಗಾ ಯೋಜನೆಯಡಿ ಹೆಚ್ಚಾಗಿ ವೈಯಕ್ತಿಕ ಕಾಮಗಾರಿಗಳ ಅನುಷ್ಠಾನವಾಗಬೇಕು, ಯಾರೋ ಪ್ರಭಾವಿಗಳು ಹೇಳಿದವರಿಗೆ ಕಾಮಗಾರಿ ನೀಡುವುದು ತರವಲ್ಲ. 16 ಕೋಟಿ ರೂ. ಯೋಜನೆಯಡಿ ತಾಲೂಕಿಗೆ ಬಿಡುಗಡೆಯಾಗಿದೆ. ಇಷ್ಟೊಂದು ಮೊತ್ತದ ಕಾಮಗಾರಿ ಆಗಿದ್ದರೂ ಯಾವ ಕಾಮಗಾರಿ, ಎಲ್ಲಿ ನಿರ್ವಹಿಸಲಾಗಿದೆ ಎಂಬ ಮಾಹಿತಿ ದೊರಕುತ್ತಿಲ್ಲ ಎಂದು ದೂರಿದ್ದಾರೆ.
ವೇಳಾಪಟ್ಟಿ ನಿಗದಿ: ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್ ಮಾತನಾಡಿ ಗ್ರಾಮಸಭೆ ನಡೆಸಲು ಈಗಾಗಲೇ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಗ್ರಾಮ ಸಭೆ ನಡೆಸಿ ಸಮಸ್ಯೆ ಆಲಿಸಲು, ಮತ್ತು ಸವಲತ್ತುಗಳ ಪಟ್ಟಿ ಮಾಡಲು ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಆಫೀಸರ್ ಆಗಿ ಆಯ್ಕೆ ಮಾಡಲಾಗಿದೆ. ವರ್ಷಕ್ಕೆ ಎರಡು ಬಾರಿ ಗ್ರಾಮಸಭೆ ನಡೆಸುವ ನಿಯಮವಿದ್ದರೂ, ನವೆಂಬರ್ ಮಾಹೆಯಲ್ಲಿ ವಿಶೇಷ ಗ್ರಾಮಸಭೆ, ಮಹಿಳಾ, ಮಕ್ಕಳ ಗ್ರಾಮಸಭೆಯನ್ನು ಅಯೋಜಿಸಲಾಗುವುದು. ನರೇಗಾದಡಿ ವೈಯಕ್ತಿಕ ಕಾಮಗಾರಿ ಕೈಗೊಳ್ಳುವ ಎಲ್ಲರಿಗೂ ಅವಕಾಶ ಮಾಡಿಕೊಡಲಾಗುವುದು ಎಂದರು.
ಮುಖಂಡರಾದ ಎಂ.ಕೆ.ಮಂಜೇಗೌಡ, ಕೆ.ಎಲ್.ಸುರೇಶ್, ಪ್ರಕಾಶ್, ಹರೀಶ್, ನಾಗೇಶ್, ಇತರರು ಇದ್ದರು.