ತುರುವೇಕೆರೆ (ತುಮಕೂರು): ಗ್ರಾಮ ವಾಸ್ತವ್ಯ ನನ್ನ ಕನಸು, ಈ ಕನಸು ಪಾಠಶಾಲೆಯಾಗಿದ್ದು, ಕಲಿಕೆಗೆ ಪೂರಕವಾಗಿದೆ. ಗ್ರಾಮವಾಸ್ತವ್ಯ ಇನ್ನಷ್ಟು ಸುಧಾರಣೆಗೆ ಹಲವು ಕ್ರಮಕೈಗೊಳ್ಳಲು ಸದಾ ಚರ್ಚೆ, ಸಂವಾದ ನಡೆಸುತ್ತಿರುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಮಾಯಸಂದ್ರದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಭಾಗವಾಗಿ ಶನಿವಾರ ದಿನವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಪ್ರತಿ ಮಂಗಳವಾರ ಜಿಲ್ಲಾಧಿಕಾರಿ ಒಂದು ತಾಲೂಕಿಗೆ ಭೇಟಿ ನೀಡಿ ತಹಸೀಲ್ದಾರ್ ಕಚೇರಿ ಕಾರ್ಯವೈಖರಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಪ್ರತಿ ವಾರ ತಹಸೀಲ್ದಾರ್ ಕಚೇರಿಗೆ ಆಯಾ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ, ಸ್ಥಳಿಯರ ಸಮಸ್ಯೆ ಆಲಿಸುವ ಜತೆಗೆ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಪರಿಶೀಲಿಸಬೇಕು, ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದ್ದೇನೆ ಎಂದರು. ಪ್ರತಿಯೊಂದು ಗ್ರಾಮವಾಸ್ತವ್ಯದಲ್ಲಿ ಒಂದೊಂದು ರೀತಿ ಸುಧಾರಣೆ ತರಲಾಗುತ್ತಿದೆ. ಜಮೀನು ಇಲ್ಲದ ದಲಿತರಿಗೆ ಉಳುಮೆ ಮಾಡಲು ಉಚಿತವಾಗಿ ಜಮೀನು ಕೊಡುವ ಚಿಂತನೆಯಿದೆ. ಮಹಿಳೆ ಹೆಸರಿನಲ್ಲಿ ಭೂಮಿ ನೋಂದಣಿ ಮಾಡಿಕೊಡಲಾಗುವುದು. ಮುಂದಿನ ನನ್ನ ಗ್ರಾಮವಾಸ್ತವ್ಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬದಲಾವಣೆ ತಂದ ಹೇಮೆ: ಹೇಮಾವತಿ ನಾಲೆಯಿಂದ ತಾಲೂಕಿನ ಚಿತ್ರಣವೇ ಬದಲಾಗಿದ್ದು, ಗುರುತ್ವಾಕರ್ಷಣೆ ಮೂಲಕ ನೀರಾವರಿಯನ್ನು ಅಳವಡಿಸಿಕೊಂಡಿದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು. ಕಂದಾಯ ಇಲಾಖೆ ಕೇವಲ 72 ಗಂಟೆಗಳಲ್ಲಿ ವಿವಿಧ ಮಾಸಾಶನಗಳನ್ನು ನೀಡಲು ಕ್ರಮಕೈಗೊಂಡಿರುವುದು ಅಭಿನಂದನಾರ್ಹ. ಕೇಂದ್ರ ಸರ್ಕಾರವು ಜಲಜೀವನ್ ಮಿಷನ್ ಅಡಿ ಮನೆ&ಮನೆಗೂ ಗಂಗೆ ಯೋಜನೆಯಡಿ ಪ್ರತಿ ಮನೆಗೂ 55 ಲೀ. ಕುಡಿಯುವ ನೀರು ಒದಗಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
1952 ರಿಂದ ಅನೇಕ ಸರ್ಕಾರಗಳು ಬಂದು ಹೋಗಿವೆ. ಆದರೆ ಈಗ ಸರ್ಕಾರವೇ ಮನೆ ಬಾಗಿಲಿಗೆ ಬಂದಿದ್ದು, ರೈತರು, ಗ್ರಾಮಸ್ಥರ ಅಹವಾಲುಗಳನ್ನು ಹೇಳಿಕೊಂಡು ಪರಿಹರಿಸಿಕೊಳ್ಳಬಹುದಾಗಿದೆ. ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಅಭಿವೃದ್ಧಿಪರ ಚಿಂತನೆಯಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗೋಣ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದರು.
ಶಾಸಕ ಮಸಾಲಾ ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ.ಸಿ.ಎಂ.ರಾಜೇಶ್ ಗೌಡ, ಗ್ರಾಪಂ ಅಧ್ಯೆ ಮಂಗಳಗೌರಮ್ಮ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಎಸಿ ವಿ.ಅಜಯ್, ಪರಿಮಳಜಗ್ಗೇಶ್ ಇದ್ದರು.
ಸಮಗ್ರ ಅಭಿವೃದ್ಧಿಗೆ ಶ್ರಮಿಸಿರುವೆ: 2018 ರಿಂದ ಈವರೆಗೆ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ತಾಲೂಕಿನಾದ್ಯಂತ 128ಕ್ಕೂ ಅಧಿಕ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ 3 ವಸತಿ ಶಾಲೆಗಳನ್ನು ಕಟ್ಟಿಸಲಾಗಿದೆ ಎಂದು ಶಾಸಕ ಮಸಾಲಾ ಜಯರಾಂ ಹೇಳಿದರು. ತಾಲೂಕಿನಾದ್ಯಂತ 138 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗಿದೆ. ಎಲ್ಲಾ ಕೆರೆ&ಕಟ್ಟೆಗಳಿಗೂ ಹೇಮಾವತಿ ನೀರು ಹರಿಸಿ ಎಲ್ಲೆಡೆ ಹಸಿರು ಕಂಗೊಳಿಸುತ್ತಿದ್ದು, ರೈತ ನೆಮ್ಮದಿಯಿಂದ ಜೀವನ ನಿರ್ವಹಿಸುವಂತಹ ವಾತಾವರಣ ನಿರ್ಮಿಸಲಾಗಿದೆ ಎಂದರು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ತಾಲೂಕಿನಾದ್ಯಂತ ಸುಮಾರು 6 ಕೋಟಿಗೂ ಅಧಿಕ ವೆಚ್ಚದಲ್ಲಿ ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಜನರ ಮನೆ ಬಾಗಿಲಿಗೆ ಸರ್ಕಾರವೇ ಬಂದು ಜನರ ಸಮಸ್ಯೆ ಪರಿಹರಿಸುವುದು ಗ್ರಾಮವಾಸ್ತವ್ಯದ ಮುಖ್ಯ ಉದ್ದೇಶ. ನನ್ನ ೇತ್ರದಲ್ಲಿ ಅಶೋಕ್ ವಾಸ್ತವ್ಯ ಮಾಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದು ಬಹಳಷ್ಟು ಖುಷಿ ತಂದಿದೆ. > ಮಸಾಲಾ ಜಯರಾಂ, ಶಾಸಕ
ತಿರುಪತಿ ತಿಮ್ಮಪ್ಪನ ದರ್ಶನವಾದಂತೆ...
ಗ್ರಾಮ ಲೆಕ್ಕಿಗರು ಕೇಂದ್ರ ಸ್ಥಾನದಲ್ಲಿ ಉಳಿಯದೆ ತಾಲೂಕು ಕೇಂದ್ರಗಳಲ್ಲಿ ಸ್ವಂತ ಕಚೇರಿ ತೆರೆದುಕೊಂಡಿದ್ದು, ಹಳ್ಳಿಯ ಜನರು ಅವರನ್ನು ಕಾಣುವುದು ತಿರುಪತಿ ದೇವರನ್ನು ಕಂಡಂತಾಗುತ್ತದೆ ಎಂದು ಸಚಿವ ಆರ್.ಅಶೋಕ್ ಮುಂದೆ ಮಾಯಸಂದ್ರದ ಲ್ಮಣಗೌಡ ದೂರಿದರು. ರಾಜ್ಯದ ವಿವಿಧ ಭಾಗದಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಕೇಳಿಬರುತ್ತಿದ್ದು ಶ್ರೀದಲ್ಲಿಯೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡುತ್ತೇನೆ. ಜನರ ಸಮಸ್ಯೆಗೆ ಸ್ಪಂದಿಸದೆ ದೂರು ಉಳಿಯುವ ಅಧಿಕಾರಿಗಳಿಗೆ ಬಿಸಿಮುಟ್ಟಿಸಲಾಗುವುದು ಎಂದು ಭರವಸೆಯಿತ್ತರು.
ತೋಟದಲ್ಲಿ ಮನೆ ಕಟ್ಟಲು ಅನುಮತಿ ಬೇಕಿಲ್ಲ!
ಹೊಲ, ತೋಟಗಳಲ್ಲಿ ವಾಸದ ಮನೆ ನಿರ್ಮಿಸಿಕೊಳ್ಳಲು ಕಂದಾಯ ಇಲಾಖೆಯ ಅನುಮತಿ ಅಗತ್ಯವಿಲ್ಲ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು. ಈ ಬಗ್ಗೆ ಅರಳೀಕೆರೆ ಪಾಳ್ಯದ ರಮೇಶ್ ಎಂಬುವವರ ಸಮಸ್ಯೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ತಕರಾರು ಮಾಡಿದರೆ ಆಯಾ ತಹಸೀಲ್ದಾರ್ಗೆ ಲಿಖಿತ ಮನವಿ ಸಲ್ಲಿಸಲು ಸೂಚಿಸಿದರು.
ಮಳೆಯಲ್ಲೂ ಅಹವಾಲು ಸಲ್ಲಿಕೆ: ಸಂಜೆ 5.30ರಿಂದ ಆರಂಭವಾದ ಅಳಲು ಸ್ವೀಕಾರ ಕಾರ್ಯಕ್ರಮ 7 ಗಂಟೆಯವರೆಗೂ ನಿರಂತರವಾಗಿ ನಡೆಯಿತು. ಸಚಿವ ಅಶೋಕ್ ಶಾಂತಚಿತ್ತರಾಗಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದು ಎಲ್ಲರಿಗೂ ಸ್ಥಳದಲ್ಲಿಯೇ ಸ್ವೀಕೃತಿ ನೀಡುವ ವ್ಯವಸ್ಥೆ ಸಹ ಮಾಡಲಾಗಿತ್ತು. ತುರುವೇಕೆರೆ ತಾಲೂಕು ಮಾತ್ರವಲ್ಲದೆ ಜಿಲ್ಲೆಯ ವಿವಿಧ ತಾಲೂಕುಗಳಿಂದಲೂ ಜನರು ಸಮಸ್ಯೆ ಹೊತ್ತು ತಂದಿದ್ದರು. ಸಂಜೆ ಧೋ ಎಂದು ಸುರಿದ ಮಳೆಯನ್ನೂ ಲೆಕ್ಕಿಸದೇ ಕಂದಾಯ ಸಚಿವರಿಗೆ ಜನರು ಅಳಲು ತಲುಪಿಸಿದರು.
ಮಾಸಾಲಾ ಹೋರಿ ಪ್ರೀತಿಗೆ ಅಶೋಕ್ ಫಿದಾ: ಸ್ಥಳಿಯ ಶಾಸಕ ಮಸಾಲಾ ಜಯರಾಂ ಅವರ ಹೋರಿ ಪ್ರೀತಿಯನ್ನು ಕಂದಾಯ ಸಚಿವ ಆರ್.ಅಶೋಕ್ ವೇದಿಕೆಯಲ್ಲಿ ಮಾತನಾಡುವಾಗ ಸ್ಮರಿಸಿದರು. 25 ಲ ರೂಪಾಯಿ ಮೊತ್ತದ ಏಕಲವ್ಯ ಹೋರಿ ಕೊಂಡುಕೊಂಡಿರುವ ಶಾಸಕ ಜಯರಾಂ ಗ್ರಾಮೀಣ ಸೊಗಡಿನ ಪ್ರತಿಕ ಎನಿಸಿದ್ದಾರೆ ಎಂದರು. ಆರು ಲದ ಜೋಡೆತ್ತುಗಳಿದ್ದ ಗಾಡಿಯಲ್ಲಿ ಕೂರಲು ಸಿಂಗರಿಸಿದ್ದರು, ನಾನು ಟ್ರಾಕ್ಟರ್ನಲ್ಲಿ ಬಂದೆ ಎಂದು ಹೋರಿಗಳ ಬಗ್ಗೆ ಸ್ಮರಿಸಿಕೊಂಡರು.
ಮಾಯಸಂದ್ರದಲ್ಲಿ ಪೊಲೀಸ್ ಠಾಣೆ ಕಟ್ಟಲು ಬಿಟ್ಟಿಲ್ಲ, ಈ ಚಿಲ್ಲರೆ ರಾಜಕಾರಣ ಬಿಟ್ಟು ನಮ್ಮೊಂದಿಗೆ ಕೈ ಜೋಡಿಸಿ, ಅಭಿವೃದ್ಧಿಯ ಮೂಲಕ ರಾಜಕಾರಣ ಮಾಡೋಣ, ಆದರ್ಶ ಗ್ರಾಪಂ ಹಾಗೂ ಶಾಲೆ ಅಭಿವೃದ್ಧಿಗೆ ಮಾಯಸಂದ್ರ ಆಯ್ಕೆ ಮಾಡಿಕೊಂಡಿದ್ದೇನೆ, ಸಹಕಾರ ನೀಡಿ. ಏನೂ ಮಾಡದೆ ಕಳ್ಳ ಎನಿಸಿಕೊಂಡು ಹೋದೆ, ನನ್ನ ಬಳಸಿಕೊಂಡು ೇತ್ರದ ಅಭಿವೃದ್ಧಿ ಮಾಡಿಸಿಕೊಳ್ಳಿ. > ಜಗ್ಗೇಶ್, ರಾಜ್ಯಸಭಾ ಸದಸ್ಯ