ಹನೂರು: ಸರ್ಕಾರದ ಸವಲತ್ತುಗಳನ್ನು ಒದಗಿಸಲು ಹಾಗೂ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಆಯೋಜಿಸಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಆನಂದಯ್ಯ ತಿಳಿಸಿದರು.
ತಾಲೂಕಿನ ಮಹಾಲಿಂಗನಕಟ್ಟೆ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಆರ್‌ಟಿಸಿ ತಿದ್ದುಪಡಿ, ಪೌತಿಖಾತೆ ಬದಲಾವಣೆ, ಜಮೀನು ಅಳತೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರ ಜತೆಗೆ ಪ್ರಕೃತಿ ವಿಕೋಪದಡಿ ಮನೆ ಹಾಗೂ ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರದಿಂದ ವಂಚಿತರಾದವರು ಅರ್ಜಿ ಸಲ್ಲಿಸಲು ಹಾಗೂ ವಿವಿಧ ಇಲಾಖೆಗಳಲ್ಲಿ ಸಿಗುವ ಸವಲತ್ತು, ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಯೋಜಿಸಿದೆ. ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆಯುವುದು ತಪ್ಪಿದಂತಾಗಿದ್ದು, ಅನುಕೂಲವಾಗಿದೆ. ಈ ದಿಸೆಯಲ್ಲಿ ಜಿಲ್ಲೆಯ ಒಂದು ಗ್ರಾಮದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ ಹೂಡಿದರೆ ತಾಲೂಕಿನಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇದು 15ನೇ ಗ್ರಾಮವಾಸ್ತವ್ಯವಾಗಿದೆ. ಹಾಗಾಗಿ ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಪಡೆಯಲು ಹಾಗೂ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಲ್ಲಿ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸುವರು. ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು. ಇನ್ನೂ ಕೆಲವನ್ನು ನಿಗದಿತ ಅವಧಿಯೊಳಗೆ ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅರಣ್ಯ ಅಧಿಕಾರಿ ಗೈರು: ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅಧೀನ ಅಧಿಕಾರಿಗಳು ಹಾಜರಿದ್ದರು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳ್ಯಾರೂ ಆಗಮಿಸಿರಲಿಲ್ಲ. ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ತಹಸೀಲ್ದಾರ್ ಆನಂದಯ್ಯ ತಿಳಿಸಿದರು.
33 ಅರ್ಜಿಗಳು ಸಲ್ಲಿಕೆ: ವಿವಿಧ ಅಧಿಕಾರಿಗಳು ತಮ್ಮ ಇಲಾಖೆ ವತಿಯಿಂದ ದೊರಕುವ ಸವಲತ್ತುಗಳ ಬಗ್ಗೆ ಮಾಹಿತಿ ತಿಳಿಸಿದರು. ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಇದರಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 21, ಗ್ರಾಮೀಣಾಭಿವೃದ್ಧಿಗೆ 5, ಸೆಸ್ಕ್ ಇಲಾಖೆಗೆ 3, ಸಾರಿಗೆ ಹಾಗೂ ಅರಣ್ಯ ಇಲಾಖೆ ಸೇರಿದಂತೆ ಒಟ್ಟು 33 ಒಂದು ಅರ್ಜಿಗಳು ಸಲ್ಲಿಕೆಯಾದವು.
ಗ್ರಾಪಂ ಸದಸ್ಯರಾದ ಮಲ್ಲೇಶ್, ರಾಜೀಬಾಯಿ, ಗ್ರೇಡ್- 2 ತಹಸೀಲ್ದಾರ್ ಧನಂಜಯ, ಶಿರಸ್ತೇದಾರ್ ನಾಗೇಂದ್ರ, ಕೃಷಿ ಅಧಿಕಾರಿ ರಘುವೀರ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ವೈದ್ಯ ಡಾ.ಪ್ರಸಾದ್, ಜಿಪಂ ಎಇಇ ಸಿದ್ದಪ್ಪಾಜಿಗೌಡ, ಆಹಾರ ನಿರೀಕ್ಷಕ ಬಸವರಾಜು, ತಾಲೂಕು ಸರ್ವೇಯರ್ ಕುಮಾರಸ್ವಾಮಿ, ಆರ್‌ಐ ಮಹದೇವಸ್ವಾಮಿ, ಗ್ರಾಮಲೆಕ್ಕಿಗ ವಾಸುದೇವ, ಗಿರಿಜನ ಆಶ್ರಮ ಶಾಲೆ ಮುಖ್ಯಶಿಕ್ಷಕ ವೆಂಕಟಾಚಲ ಇನ್ನಿತರರು ಇದ್ದರು.