ಜಿಲ್ಲೆ

ಗ್ರಾಮವನ್ನೇ ಹೆಸರಿಗೆ ಬರೆಸಿಕೊಂಡ ಶಾಸಕ!

 ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿಗೆ ದೂರು | ಹೊಂಗಾಣಿದೊಡ್ಡಿ ಗ್ರಾಮಸ್ಥರಿಂದ ಆರೋಪ

ಕನಕಪುರ : ಜನರ ಕಣ್ಣೀರೊರೆಸಬೇಕಾದ ಶಾಸಕರೊಬ್ಬರು ಇಡೀ ಗ್ರಾಮದ ಸ್ವತ್ತನ್ನೇ ಅವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ವತಃ ಗ್ರಾಮಸ್ಥರೇ ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಮುಂದೆ ಈ ಬಗ್ಗೆ ಅಳಲು ತೋಡಿಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಜಿಲ್ಲಾ ಲೋಕಾಯುಕ್ತದಿಂದ ಬುಧವಾರ ನಗರ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಹೊಂಗಾಣಿದೊಡ್ಡಿ ಗ್ರಾಮದ ಹಲವರು ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಸ್ನೇಹಾ ಮುಂದೆ ಈ ಬಗ್ಗೆ ಅಲವತ್ತುಕೊಂಡಿದ್ದಾರೆ.

ಶಾಸಕ ಇಕ್ಬಾಲ್ ಹುಸೇನ್ ಅವರು ಸಾತನೂರು ಹೋಬಳಿಯ ಹೊಂಗಾಣಿದೊಡ್ಡಿ ಗ್ರಾಮವನ್ನೇ ಅವರ ಹೆಸರಿಗೆ ಬರೆಸಿಕೊಂಡಿದ್ದಾರೆ. ಮೂರು ತಲೆಮಾರಿನಿಂದ ಗ್ರಾಮದಲ್ಲಿರುವ ನಮಗೆ ಕೃಷಿ ಚಟುವಟಿಕೆ ಭೂಮಿಯೂ ಇಲ್ಲ, ವಸತಿಯೂ ಇಲ್ಲ ಎನ್ನುವಂತಾಗಿದೆ. ನಮಗೆ ನ್ಯಾಯ ಕೊಡಿಸಿ ಸ್ವಾಮಿ ಎಂದು ಮನವಿ ಮಾಡಿದರು.

ಅಂತೆಯೇ, ಈ ಪ್ರಕರಣ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣವನ್ನು ಭೂ ನ್ಯಾಯ ಮಂಡಳಿಯಲ್ಲಿ ಇತ್ಯರ್ಥ ಮಾಡಿಕೊಳ್ಳಲು ಸೂಚನೆ ನೀಡಿದೆ. ಆದರೂ, ಇದನ್ನೆಲ್ಲ ಉಲ್ಲಂಘಿಸಿ ಶಾಸಕರ ಹೆಸರಿಗೆ ನೋಂದಣಿ ಮಾಡಿಸಿಕೊಂಡು ನಮ್ಮನ್ನು ಬೀದಿ ಪಾಲು ಮಾಡಿದ್ದಾರೆಂದು ಗ್ರಾಮದ ಮಲ್ಲೇಶ ಮತ್ತು ಇತರರು ನೋವು ತೋಡಿಕೊಂಡರು.

ಸಮಯಕ್ಕೆ ಬಾರದ ಅಧಿಕಾರಿಗಳು

ತಾಲೂಕು ಕಚೇರಿ ಅಧಿಕಾರಿಗಳು, ಸಿಬ್ಬಂದಿ, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವುದಿಲ್ಲ. ಜನರ ಸಮಸ್ಯೆ ಬಗೆ ಹರಿಯುತ್ತಿಲ್ಲ. ಪ್ರತಿಯೊಂದಕ್ಕೂ ಇಂತಿಷ್ಟು ಲಂಚ ಎಂದೇ ನಿಗದಿ ಮಾಡಿದ್ದಾರೆ. ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಅನ್ಯಾಯದ ಅಂಗಡಿಗಳಾಗಿ ಗ್ರಾಹಕರಿಂದ ತಲಾ ಹತ್ತರಿಂದ 20 ರೂ. ಪಡೆದು ತೂಕದಲ್ಲಿ ಮೋಸ ಮಾಡುತ್ತಿವೆೆ. ಇಲ್ಲಿ ಜನರ ಗೋಳು ಕೇಳುವವರಿಲ್ಲದಂತಾಗಿದೆ ಎಂದು ರಾಜ್ಯ ರೈತ ಸಂಘದ ಮುನಿರಾಜು ಆರೋಪಿಸಿದರು.

ಜೀವಂತವಿಲ್ಲ ಸಕಾಲ

ಸಾರ್ವಜನಿಕರ ನಿಗದಿತ ಅವಧಿಯಲ್ಲಿ ಸೇವೆ ಕಲ್ಪಿಸಲು ಆರಂಭಿಸಿದ್ದ ಸಕಾಲ ಯೋಜನೆಯನ್ನು ತಾಲೂಕಿನಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ. ಸಕಾಲದಲ್ಲಿ ಅರ್ಜಿ ಸಲ್ಲಿಸಿದರೆ ಕೆಲಸ ಸುಗಮವಾಗುತ್ತವೆ. ಆದರೆ, ಇದರ ಬದಲು ಅಧಿಕಾರಿಗಳು ಅರ್ಜಿ ಪಡೆದು ಅಲೆದಾಡಿಸುತ್ತಿದ್ದಾರೆಂದು ಜಯಕರ್ನಾಟಕ ಜನಪರ ವೇದಿಕೆಯ ಕುಮಾರಸ್ವಾಮಿ ದೂರಿದರು.

ರೈತರು ಎಷ್ಟೇ ಅಲವತ್ತುಕೊಂಡರೂ ಸಮಸ್ಯೆ ಬಗೆ ಹರಿಯುತ್ತಿಲ್ಲ. ರಾಮನಗರ ಶಾಸಕರೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ನಮಗೆ ನ್ಯಾಯ ಕೊಡಿಸುವವರು ಯಾರು ಎಂದು ಅಳಲು ತೋಡಿಕೊಂಡರು.

ನಗರದಲ್ಲಿ ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಯ ಸಾವಿರಾರು ಮನೆಗಳು ಬಡವರ ವಸತಿಗೆ ಅನುಕೂಲವಾಗದೆ ಪಾಳುಮನೆಗಳಾಗುತ್ತಿವೆ, ಇದರಲ್ಲಿ ಆಗಿರುವ ಅನ್ಯಾಯ ಸರಿಪಡಿಸಿ ಬಡವರಿಗೆ ನಿವೇಶನ ಕೊಡಿಸಬೇಕು ಎಂದು ಅಂಬೇಡ್ಕರ್ ನಗರದ ಭಾಗ್ಯಾ ಮತ್ತು ಶ್ರೀರಾಮಸೇನೆ ನಾಗಾರ್ಜುನ್ ಮನವಿ ಮಾಡಿದರು.

ಶಿಸ್ತುಕ್ರಮ ಕ್ರಮದ ಎಚ್ಚರಿಕೆ

ಎಲ್ಲ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಸ್ನೇಹಾ, ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಬೇಕು. ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು, ಎಲ್ಲ ಸರ್ಕಾರಿ ಕಚೇರಿಗಳ ಎದುರು ಲೋಕಾಯುಕ್ತ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು ಎಂದು ಸೂಚಿಸಿದರು.

ಸರ್ಕಾರಿ ಅಧಿಕಾರಿಗಳಿಗೆ ರೈತರು ಸಾರ್ವಜನಿಕರು ಯಾವುದೇ ಕಾರಣಕ್ಕೂ ಲಂಚ ನೀಡಬೇಡಿ. ಆದರೆ, ಮನವಿ ಸಲ್ಲಿಸಿದರೆ ಸಾಲದು, ದಾಖಲಾತಿಗಳೊಂದಿಗೆ ದೂರು ನೀಡಬೇಕು, ಕಚೇರಿಗಳಿಗೆ ಅರ್ಜಿ ನೀಡುವಾಗ ಸ್ವೀಕೃತಿ ಪ್ರತಿ ಪಡೆಯಬೇಕು, ಲಂಚ ಪಡೆಯುವವರಂತೆ ಕೊಡುವವರು ಆರೋಪಿಗಳಾಗುತ್ತಾರೆ ಎಂದರು.

ಲೋಕಾಯುಕ್ತ ಡಿವೈಎಸ್‌ಪಿ ಸುಧೀರ್, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಅನಂತರಾಮು, ಸಂದೀಪ್, ಹನುಮಂತಕುಮಾರ್, ಸಿಬ್ಬಂದಿ ಸೇರಿ ಸರ್ಕಾರಿ ವಿವಿಧ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯಿತಿ ಇ.ಓ.ಭೈರಪ್ಪ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.