ಹೊಸಕೋಟೆ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ 45 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದನ್ನು ಗಮನಿಸಿದಾಗ ಗ್ರಾಮೀಣ ಭಾಗದಲ್ಲಿ ಕೂಡ ಬಿಜೆಪಿಯ ನೆಲೆಗಟ್ಟು ಭದ್ರವಾಗುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಶಾಸಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ನಗರದ ಹೊರವಲಯದ ಸೈಯದ್ ಪ್ಯಾಲೇಸ್‌ನಲ್ಲಿ ಬಿಜೆಪಿ ಭಾನುವಾರ ಏರ್ಪಡಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ಸಿಗುತ್ತಿರುವ ಬೆಂಬಲವನ್ನು ಕಂಡ ಇತರ ಪಕ್ಷಗಳಲ್ಲಿ ನಡುಕ ಉಂಟಾಗಿದೆ. ಕಾಂಗ್ರೆಸ್‌ನಲ್ಲಿ ಈಗಾಗಲೆ ಬಣ ರಾಜಕೀಯ ಶುರುವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವು ಮುಖಂಡರು ಬಿಜೆಪಿಗೆ ಪಕ್ಷಾಂತರಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಪಕ್ಷಕ್ಕೆ ಆಸರೆಯಾಗಿದೆ. ದೇಶವಿದೇಶಗಳಲ್ಲಿ ಕೂಡ ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯ ಹಾಗೂ ಅವರ ಕಾರ್ಯಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗಾಗಿ, ಮುಂದಿನ ಬಾರಿ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದರು.
ಜನಪರ ಆಡಳಿತಕ್ಕೆ ಬೆಂಬಲ: ಕೇಂದ್ರ ಸರ್ಕಾರ 100 ಕೋಟಿ ಲಸಿಕೆಗಳನ್ನು ಉಚಿತವಾಗಿ ಕೊಡುವ ಮೂಲಕ ದೇಶದಲ್ಲಿ ಕರೊನಾ ಪಿಡುಗನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. ಜತೆಗೆ ಶಿಕ್ಷಣಾಭಿವೃದ್ಧಿ, ಆರೋಗ್ಯಾಭಿವೃದ್ಧಿ, ಮಹಿಳಾಭಿವೃದ್ಧಿ ಕೈಗೊಂಡು ಜನಪರ ಆಡಳಿತ ನೀಡುತ್ತಿದೆ. ಆದ್ದರಿಂದ, ಬಿಜೆಪಿಗೆ ಜನಬೆಂಬಲ ಹೆಚ್ಚಾಗುತ್ತಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಜನಸ್ವರಾಜ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕುತಂತ್ರದಿಂದ ಉಪಚುನಾವಣೆಯಲ್ಲಿ ಸೋಲು: ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕೆಲವರು ರಾಜಕೀಯ ಕುತಂತ್ರ ಮಾಡಿದರು. ಹೀಗಾಗಿ ಸೋಲನುಭವಿಸಬೇಕಾಯಿತು. ಆದರೂ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರು ಬಿಜೆಪಿ ಅಭ್ಯರ್ಥಿಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿದ್ದಾರೆ. ಬಹುಮತದೊಂದಿಗೆ ಆಡಳಿತ ಚುಕ್ಕಾಣಿಯನ್ನೂ ಹಿಡಿದಿದ್ದಾರೆ. ಇದೆಲ್ಲವನ್ನೂ ಗಮನಿಸಿದಾಗ ಮುಂದಿನ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಶತಃಸಿದ್ಧ ಎಂದು ಎಂಟಿಬಿ ನಾಗರಾಜ್ ಹೇಳಿದರು.
ಸಚಿವ ಬೈರತಿ ಬಸವರಾಜು ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪಕ್ಷದ ಬಿ.ಎಂ. ನಾರಾಯಣಸ್ವಾಮಿ ಅವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ತುಳಸಿ ಮುನಿರಾಜ್, ಮಹೇಶ್ ಟೆಂಗಿನಕಾಯಿ, ಮಾಜಿ ಶಾಸಕ ಜಿ. ಚಂದ್ರಣ್ಣ, ಬಿಜೆಪಿ ತಾಲೂಕು ಅದ್ಯಕ್ಷ ಸತೀಶ್, ಯುವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ರಾಮು, ನಗರಸಭೆ ಅಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷೆ ಶೋಭಾ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್, ಟೌನ್ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಬಾಲಚಂದ್ರನ್ ಮತ್ತಿತರರಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಜೋರಾಗಿದೆ. ದಿನದಿಂದ ದಿನಕ್ಕೆ ಜಿಲ್ಲೆಯು ವೇಗವಾಗಿ ಬೆಳೆಯುತ್ತಿದೆ. ರಾಜಕೀಯ ಹಾಗೂ ಭೌಗೋಳಿಕವಾಗಿ ಬದಲಾವಣೆ ಕಾಣುತ್ತಿದೆ. ಜತೆಗೆ ಈ ಭಾಗದಲ್ಲಿ ಬಿಜೆಪಿ ಸಂಘಟನೆ ಬಲಗೊಳ್ಳುತ್ತಿದೆ. ಡಾ. ಸಿ. ಅಶ್ವತ್ಥನಾರಾಯಣ, ಸಚಿವ
ಕಾಂಗ್ರೆಸ್, ಜೆಡಿಎಸ್‌ಗೆ ಭವಿಷ್ಯ ಇಲ್ಲ: ಸಂಸತ್‌ನಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಕೂಡ ಕಾಂಗ್ರೆಸ್‌ಗೆ ಅವಕಾಶ ಇಲ್ಲದಾಗಿದೆ. ಅದರಂತೆ, ಉತ್ತರ ಕರ್ನಾಟಕ ಭಾಗದಲ್ಲಿ ಕೂಡ ಜೆಡಿಎಸ್‌ನ ಒಂದೊಂದೇ ಕೊಂಡಿ ಕಳಚುತ್ತಿದ್ದು, ಅಳಿವಿನಂಚು ತಲುಪುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಎರಡು ಪಕ್ಷಗಳಿಗೆ ಯಾವುದೇ ಭವಿಷ್ಯ ಇಲ್ಲ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಜನಸ್ವರಾಜ್ ಸಮಾವೇಶಕ್ಕೆ ತೆರಳುವ ಮುನ್ನ ನಗರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ಪಂಜಾಬ್‌ನಲ್ಲಿ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ. ಭಾರತದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇಸ್ಲಾಂ ಭಯೋತ್ಪಾದಕ ಬೆಂಬಲಿತ ರಾಷ್ಟ್ರದ ಬಗ್ಗೆ ಒಲವಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಸವಾಲು ಹಾಕಿದರು.
ಪಂಜಾಬ್‌ನಲ್ಲಿ ಸಿಧು ಅವರಿಂದಾಗಿ ಕಾಂಗ್ರೆಸ್ ಅವನತಿಯ ಹಾದಿಯಲ್ಲಿದ್ದರೆ, ರಾಜ್ಯದಲ್ಲಿ ಸಿದ್ದು-ಡಿಕೆಶಿ ನಡುವಿನ ಆಂತರಿಕ ಯುದ್ಧದಿಂದ ಕಾಂಗ್ರೆಸ್ ಪತನದ ಹಾದಿಯಲ್ಲಿ ಸಾಗಿದೆ ಎಂದರು.
15 ಮೇಲ್ಮನೆ ಸ್ಥಾನ ಗೆಲ್ಲುವ ವಿಶ್ವಾಸ: ಬಿಜೆಪಿ ಬಹುಮತದೊಂದಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ದ್ವೆವಾರ್ಷಿಕ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ ಬಿಜೆಪಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಲಿದೆ ಎಂದು ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಸಮರೋಪಾದಿಯಲ್ಲಿ ಪರಿಹಾರ ಕಾರ್ಯ: ಕರೊನಾ ಸೋಂಕಿನ 2 ಅಲೆಗಳನ್ನು ಹಿಮ್ಮೆಟ್ಟಿಸುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಅದರಂತೆ, ಸದ್ಯ ಪ್ರಾಕೃತಿಕ ವಿಕೋಪದಿಂದ ಬಳಲುತ್ತಿರುವ ರಾಜ್ಯದ ಜನತೆ ಎಲ್ಲ ಅಗತ್ಯ ನೆರವು ನೀಡಲಾಗುವುದು. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಬಗ್ಗೆ ಜನರಿಂದ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಿಎಂ ಹೇಳಿದರು.