ಗೋಕಾಕ: ನಗರದಲ್ಲಿ ಜರುಗುತ್ತಿರುವ ಗ್ರಾಮದೇವತೆಯರ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ರಥೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ಐತಿಹಾಸಿಕ ರಥೋತ್ಸವ ಕಾರ್ಯಕ್ರಮ ವೀಕ್ಷಣೆಗೆ ಜನ ಸಾಗರವೇ ಹರಿದು ಬಂದಿತ್ತು.
ಬುಧವಾರ ಬೆಳಗ್ಗೆ ದ್ಯಾಮವ್ವಾ ದೇವಿಯರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.ಮಧ್ಯಾಹ್ನ 2 ಗಂಟೆಗೆ ನಗರದ ಸೋಮವಾರ ಪೇಟೆಯಿಂದ ಎರಡು ರಥಗಳು, ವಾದ್ಯ ಮೇಳದೊಂದಿಗೆ ದ್ಯಾಮವ್ವಾ ಗುಡಿಗೆ ತಲುಪಿದವು. ರಥೋತ್ಸವದ ಮಾರ್ಗದುದ್ದಕ್ಕೂ ಭಕ್ತಿಯ ಜಯಘೋಷ ಮೊಳಗಿದವು.
ಅತಿ ಹೆಚ್ಚು ಭಂಡಾರ ಎರಚುವ ಹೆಗ್ಗಳಿಕೆ: ಐತಿಹಾಸಿಕ ಮಹಾಲಕ್ಷ್ಮಿ ದೇವಿಯರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ರಥೋತ್ಸವದ ವೇಳೆ ಸೇರಿದ್ದ ಭಕ್ತಗಣ ಭಂಡಾರದಲ್ಲಿ ಮಿಂದೆದ್ದು, ಭಕ್ತಿಯ ಸೇವೆ ಸಲ್ಲಿಸಿದರು. ಇಲ್ಲಿನ ದೇವಿಯರಿಗೆ ಭಕ್ತಿಯಿಂದ ಬೇಡಿಕೊಂಡು ಭಂಡಾರ ಹಾರಿಸಿದರೇ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬ ಬಲವಾದ ನಂಬಿಕೆ ಇಲ್ಲಿನ ಜನರಲ್ಲಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಭಂಡಾರ ಎರಚುವ ಜಾತ್ರೆ ಎಂಬ ಹೆಗ್ಗಳಿಕೆಗೆ ಗೋಕಾಕ ಜಾತ್ರೆ ಸಾಕ್ಷಿಯಾಗಿದೆ.
ಶಾಸಕ, ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ, ವಿಪ ಸದಸ್ಯ ಲಖನ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಅಮರನಾಥ ಜಾರಕಿಹೊಳಿ, ಸನತ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಜಾತ್ರಾ ಕಮಿಟಿಯ ಪ್ರಭಾಕರ ಚವ್ಹಾಣ, ದಸ್ತಗಿರ ಕೋತವಾಲ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.
ಇಂದು: ಜು.3ರಂದು ಎರಡು ದೇವಿಯರ ತೇರುಗಳು ಮಧ್ಯಾಹ್ನ 2 ಗಂಟೆಗೆ ದ್ಯಾಮವ್ವನ ಗುಡಿಯಿಂದ ಹೊರಟು, ಹಳೇ ಮುನಸಿಪಲ್ಟಿ ಮತ್ತು ಚಾವಡಿ ರಸ್ತೆ ಮೂಲಕ ಒಂದನೇಯ ತೇರು ಅಜಂತಾ ಕೂಟಿಗೆ ಹಾಗೂ ಎರಡನೇ ತೇರು ಚೌದರಿ ಬಾಫನಾ ಕೂಟಿಗೆ 6 ಗಂಟೆಗೆ ಬರುವವು. ಸಂಜೆ 7.30 ಗಂಟೆಗೆ ವಾಲ್ಮೀಕಿ ಕ್ರೀಡಾಂಗಣದಲ್ಲಿ ವರ್ಣರಂಜಿತ ಮದ್ದು ಹಾರಿಸುವ ಕಾರ್ಯಕ್ರಮ ಜರುಗಲಿದೆ.
ದೇವಿಯರಿಂದ ದುಷ್ಟ ಶಕ್ತಿಗಳ ಸಂಹಾರ: ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಮಹತ್ವವಿದೆ. ದುಷ್ಟಶಕ್ತಿಗಳಿಂದ ಗ್ರಾಮಗಳನ್ನು ರಕ್ಷಿಸಿ ಗ್ರಾಮದೇವತೆಯರು ನೆಮ್ಮದಿಯ ಜೀವನ ನೀಡುತ್ತಾರೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು. ನಗರದ ಸೋಮವಾರ ಪೇಟೆಯಲ್ಲಿ ಬುಧವಾರ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ದೇವತೆಯರ ಅನುಗ್ರಹಕ್ಕೆ ಪಾತ್ರರಾಗಲು ಆನಾದಿಕಾಲದಿಂದಲೂ ಜಾತ್ರೆಗಳನ್ನು ಆಚರಿಸುತ್ತ ಬಂದಿದ್ದಾರೆ. ನಾವೆಲ್ಲರೂ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗೋಣ ಎಂದರು.
ಕಣ್ಮನ ಸೆಳೆದ ಹೊನ್ನಾಟ: ಹೊನ್ನಾಟ ಕಾರ್ಯಕ್ರಮವು ಮಂಗಳವಾರ ರಾತ್ರಿ 11ಗಂಟೆಗೆ ಪ್ರಾರಂಭಗೊಂಡು ಬುಧವಾರ ಬೆಳಗ್ಗೆ 8 ಗಂಟೆಯವರೆಗೂ ಅದ್ದೂರಿಯಾಗಿ ಶ್ರದ್ಧಾ ಭಕ್ತಿಯಿಂದ ಜರುಗಿತು. ಅಂಬಿಗೇರ ಗಲ್ಲಿಯಿಂದ ಪ್ರಾರಂಭಗೊಂಡು ಉಭಯ ದೇವಿಯರು ಹೊನ್ನಾಟ ಆಡುತ್ತ ಕಿಲ್ಲಾ, ಬನಶಂಕರಿ ಗುಡಿಯ ಸಮೀಪ ಇರುವ ನಿಪ್ಪಾಣಿ, ದೇಶಪಾಂಡೆ, ಚವ್ಹಾಣ, ಮಾಲದಿನ್ನಿ, ಈಗವೆ, ಬಾಣಕರಿ, ವಾಳವಿ ಅವರ ಮನೆಗಳಲ್ಲಿ ಉಡಿ ತುಂಬಿಸಿಕೊಂಡು ಸೋಮವಾರ ಪೇಟೆಯ ಹಿಡಕಲ್ ರಾವಸಾಬ ಮನೆಯ ಅಂಗಳದಲ್ಲಿ ಬುಧವಾರ ಬೆಳಗ್ಗೆ ದೇವಿಯರು ಆಸೀನರಾದರು.