ಜಿಲ್ಲೆ

ಗ್ರಾಮಠಾಣಾ ಸರ್ವೆಗೆ ಶಾಸಕ ಜ್ಞಾನೇಂದ್ರ ಸೂಚನೆ

ನಗರ: ಮೂಡುಗೊಪ್ಪ ಗ್ರಾಪಂಗೆ ಶುಕ್ರವಾರ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಜನರಿಗೆ ಹಕ್ಕುಪತ್ರ ನೀಡುವ ಸಂಬಂಧ ಮೋಜಿಣಿ ಸರ್ವೆ ಮಾಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಶಾಸಕರು ಸಾಗರದ ಹೆಚ್ಚುವರಿ ಅಭಿವೃದ್ಧಿ ಸರ್ವೆ ಅಧಿಕಾರಿ(ಎಡಿಎಲ್​ಆರ್)ಗೆ ದೂರವಾಣಿಯಲ್ಲಿ ಮಾತನಾಡಿ ಕೂಡಲೆ ಸರ್ವೆ ಕಾರ್ಯ ಮುಗಿಸುವಂತೆ ತಾಕೀತು ಮಾಡಿದರು. ಇನ್ನೇನು ಗ್ರಾಪಂ ಚುನಾವಣೆ ಹತ್ತಿರದಲ್ಲಿದ್ದು ನೀತಿಸಂಹಿತೆ ಜಾರಿಯಾದ ನಂತರ ಹಕ್ಕುಪತ್ರ ನೀಡಲು ಸಾಧ್ಯವಾಗುವುದಿಲ್ಲ. ಕೂಡಲೆ ಸರ್ವೆ ಕಾರ್ಯ ಮಾಡಿ ಗ್ರಾಮಠಾಣಾ ಹಕ್ಕುಪತ್ರ ನೀಡಲು ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಪಂ ಅಧ್ಯಕ್ಷೆ ಲತಾ ನಾಗೇಶ್, ಸದಸ್ಯರಾದ ಎಚ್.ವೈ.ಸತೀಶ್​ಗೌಡ, ಕೆ.ಬಿ.ಕುಮಾರ್ ಬೈಸೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಇತರರಿದ್ದರು.

8 ಲಕ್ಷ ರೂ. ಪರಿಹಾರ ವಿತರಣೆ: ಅನಾರೋಗ್ಯ ಪೀಡಿತರಿಗೆ ಸ್ಪಂದಿಸುವ ದೃಷ್ಟಿಯಿಂದ ತೀರ್ಥಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಿಎಂ ಪರಿಹಾರ ನಿಧಿಯಿಂದ 8 ಲಕ್ಷ ರೂ.ಗೂ ಹೆಚ್ಚು ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜ್ಞಾನೇಂದ್ರ ಹೇಳಿದರು.

ನಗರ ಸಮೀಪದ ಅನಾರೋಗ್ಯಪೀಡಿತ ಚಕ್ಕಾರು ಅರುಣಕುಮಾರ್ ಧರ್ಮಪ್ಪ ಗೌಡ ಮನೆಗೆ ಬೇಟಿ ನೀಡಿದ ಶಾಸಕರು 2 ಲಕ್ಷ ರೂ. ಚೆಕ್ ವಿತರಿಸಿದರು. ಚಕ್ಕಾರು ಅರುಣಕುಮಾರ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು 6 ಲಕ್ಷ ರೂ. ವೆಚ್ಚದಲ್ಲಿ ಚಿಕಿತ್ಸೆ ಮಾಡಿ ಚೇತರಿಸಿಕೊಂಡಿದ್ದಾರೆ ಎಂದರು.

ಮ್ಯಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಎಪಿಎಂಸಿ ನಿರ್ದೇಶಕ ಕಣ್ಕಿ ಮಹೇಶ್, ಪ್ರಮುಖರಾದ ಸಿ.ವಿ.ಚಂದ್ರಶೇಖರ್, ಎನ್.ವೈ.ಸುರೇಶ್, ಕವಿರಾಜ್ ಕಾನಬೈಲ್, ವಿನಾಯಕ ಚಕ್ಕಾರು, ನಿತಿನ್ ನಗರ, ಕೆ.ರಮೇಶ್, ಕಿಶೋರ್, ಬಾಲರಾಜ್, ಶಾಸಕರ ಪಿಎ ಬಸವರಾಜ್ ಇದ್ದರು.