ಗೌರಿಬಿದನೂರು : ಜನತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಂಗ್ರಹವಾಗುವ ಘನ ಮತ್ತು ದ್ರವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವುದು ಅತೀ ಅವಶ್ಯ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ತಾಲೂಕಿನ ಬಿ.ಬೊಮ್ಮಸಂದ್ರದಲ್ಲಿ ಗ್ರಾಮ ಪಂಚಾಯಿತಿಯಿಂದ ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಣೆಗೆ ಭಾನುವಾರ ಕಸದ ಬುಟ್ಟಿಗಳನ್ನು ವಿತರಿಸಿ ಮಾತನಾಡಿದರು.ಕಸವನ್ನು ಸಮೀಪದ ಬೀದಿ ಹಾಗೂ ಖಾಲಿ ನಿವೇಶನಗಳಿಗೆ ಎಸೆಯದೆ ಪ್ರತ್ಯೇಕ ಬುಟ್ಟಿಗಳಲ್ಲಿ ಸಂಗ್ರಹಿಸಿ ಮನೆ ಬಾಗಿಲಿಗೆ ಬರುವ ಗ್ರಾಮ ಪಂಚಾಯಿತಿಯ ಕಸ ಸಂಗ್ರಹ ವಾಹನಕ್ಕೆ ನೀಡಬೇಕು, ಈ ಮೂಲಕ ಗ್ರಾಮವನ್ನು ಸ್ವಚ್ಛತೆಯೆಡೆಗೆ ಕೊಂಡೊಯ್ಯಬೇಕು ಎಂದರು.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ನೈರ್ಮಲ್ಯಯುಕ್ತ ಗ್ರಾಮಗಳನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ, ಸರ್ಕಾರ ವಿವಿಧ ಯೋಜನೆಯಡಿ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದ್ದು, ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಇದರ ಸಮರ್ಪಕ ಬಳಕೆಯಾಗಬೇಕಾಗಿದೆ ಎಂದು ಜಿಪಂ ಸದಸ್ಯೆ ಎ.ಅರುಂಧತಿ ಸೂಚಿಸಿದರು.
ತಾಪಂ ಅಧ್ಯಕ್ಷ ಆರ್.ಲೋಕೇಶ್, ಎಪಿಎಂಸಿ ಅಧ್ಯಕ್ಷ ಅಶ್ವತ್ಥರೆಡ್ಡಿ, ನರೇಗಾ ಎಡಿ ಪಿ.ಚಿನ್ನಪ್ಪ, ಗ್ರಾಪಂ ಆಡಳಿತಾಧಿಕಾರಿ ಜಗದೀಶ್, ಪಿಡಿಒ ಬಿ.ವಿ.ಗೋವಿಂದಪ್ಪ, ಮುಖಂಡರಾದ ಆವುಲರೆಡ್ಡಿ, ಶ್ರೀರಾಮರೆಡ್ಡಿ, ಖಾದರ್ ಸುಭಾನ್ ಖಾನ್, ಎಸ್.ಪ್ರಕಾಶರೆಡ್ಡಿ, ಜೆ.ನಾರಾಯಣಪ್ಪ, ಬಿ.ಸೋಮಪ್ಪ ಇತರರಿದ್ದರು.