ಕಡೂರು ತಾಲೂಕಿನ ಬಾಣನಹಳ್ಳಿ ಗ್ರಾಮದ ಬಳಿ ಆವುತಿ ಹಳ್ಳದ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ವಂದನಾ, ರೇವಣ್ಣ, ಶ್ರೀಕಂಠ ಒಡೆಯರ್, ಬಾಬು, ಕೃಷ್ಣಮೂರ್ತಿ, ಹರ್ಷ ಮತ್ತಿತರರಿದ್ದರು.  
ಜಿಲ್ಲೆ

ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಶ್ರಮ

ಕಡೂರು: ಮತಿಘಟ್ಟ ಹಾಗೂ ಕೆರೆಸಂತೆ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಲಕ್ಷ್ಯಕ್ಕೊಳಗಾದ ಗ್ರಾಮಗಳನ್ನು ಗುರುತಿಸಿ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಭಾನುವಾರ ಲಕ್ಕೇನಹಳ್ಳಿ ಮತ್ತು ಕರಿಯನಹಳ್ಳಿ ಗ್ರಾಮಗಳ ಸಮೀಪ ಆವುತಿ ಹಳ್ಳಕ್ಕೆ ಲೋ ಲೆವೆಲ್ ಪೈಪ್ ಕಾಸ್‌ವೇ ನಿರ್ಮಾಣದ ಕಾಮಗಾರಿ ಹಾಗೂ ಹಳ್ಳದಲ್ಲಿ ಗಿಡಗಂಟಿಗಳ ತೆರವುಗೊಳಿಸುವಿಕೆಯ 1.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಬಹುವರ್ಷಗಳ ಬೇಡಿಕೆಯಾಗಿದ್ದ ಕಾಲುವೆಗಳ ನಿರ್ಮಾಣಕ್ಕೆ ಒತ್ತುಕೊಟ್ಟು ವಿಶ್ವೇಶ್ವರಯ್ಯ ಜಲ ನಿಗಮದ ಅಡಿಯಲ್ಲಿ ವಿಶೇಷ ಅನುದಾನ ದೊರಕಿಸಿಕೊಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಹೊರತಾಗಿರುವ ಅನುದಾನವನ್ನು ಮಂಜೂರು ಮಾಡಿಸಲು ಕಷ್ಟ ಸಾಧ್ಯವಾಗಿತ್ತು. ಕಾಲುವೆ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ನೀರಾವರಿ ಸಚಿವರ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಅನುಮೋದನೆ ದೊರಕಿತು ಎಂದರು.

ಕಸಬಾ ಭಾಗದಲ್ಲಿ ಬಹುತೇಕ ಗ್ರಾಮಗಳು ಈ ಹಿಂದೆ ಅಭಿವೃದ್ದಿಯಲ್ಲಿ ಸಾಕಷ್ಟು ನಿರ್ಲಕ್ಷ್ಯಗೊಂಡಿದ್ದವು. ನಾನು ಶಾಸಕನಾದ ಬಳಿಕ ಅತಿ ಹಿಂದುಳಿದ ಗ್ರಾಮಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಮಸ್ಥರ ಬೇಡಿಕೆಯಂತೆ ಕಾಲುವೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ನಂಜಪ್ಪನಹಳ್ಳಿ ಮಾರ್ಗದಿಂದ ಬಾಣನಹಳ್ಳಿ ರಸ್ತೆ ಅಭಿವೃದ್ಧಿಗೊಳಿಸಲಾಗುವುದು ಎಂದರು.

ವಿಶ್ವೇಶ್ವರಯ್ಯ ಜಲ ನಿಗಮದ ಎಇಇ ಹರ್ಷ ಮಾತನಾಡಿ, ಶಾಸಕರ ವಿಶೇಷ ಕಾಳಜಿ ಮೇರೆಗೆ ಅನುದಾನ ಮಂಜೂರಾತಿ ದೊರೆತಿದ್ದು, ಲಕ್ಕೇನಹಳ್ಳಿ ಮತ್ತು ಬಾಣನಹಳ್ಳಿಗಳಿಗೆ ಹಾಗೂ ಕರಿಯನಹಳ್ಳಿ ಮತ್ತು ಕೆರೆಸಂತೆ ಗ್ರಾಮಗಳಿಗೆ ಸಂಪರ್ಕ ಹೊಂದುವಂತೆ ಎರಡು ಕಾಲುವೆಗಳ ನಿರ್ಮಾಣದ ಕಾಮಗಾರಿಯನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸಲಾಗುತ್ತದೆ. ಇದಕ್ಕೆ ರೈತರ ಸಹಕಾರ ಅತಿಮುಖ್ಯವಾಗಲಿದೆ ಎಂದರು.

ಕೆರೆಸಂತೆ ಗ್ರಾಪಂ ಅಧ್ಯಕ್ಷೆ ವಂದನಾ, ಮಾಜಿ ಅಧ್ಯಕ್ಷ ರೇವಣ್ಣ, ಶ್ರೀಕಂಠ ಒಡೆಯರ್, ಬಿ.ಆರ್.ರವಿ. ಕುಮಾರ್, ಮಹೇಶ್, ಬಾಬು, ರವಿ, ಲಕ್ಕೇನಹಳ್ಳಿ ಕೃಷ್ಣಮೂರ್ತಿ, ಎಇಇ ತ್ಯಾಗರಾಜ್, ಕಿಶೋರ್, ರವಿನಾಯ್ಕ ಹಾಗೂ ಗ್ರಾಮಸ್ಥರು ಇದ್ದರು.