ಎಚ್.ಡಿ.ಕೋಟೆ: ಗ್ರಾಮಗಳ ಅಭಿವೃದ್ಧಿ ಆಗಬೇಕಾದರೆ ಸ್ವಸಹಾಯ ಸಂಘಗಳ ಒಕ್ಕೂಟಗಳು ಕಾರ್ಯೋನ್ಮುಖವಾಗಬೇಕು. ಸಂಸ್ಥೆಯಿಂದ ಸಿಗುವ ಸೌಲಭ್ಯಗಳು ಸದ್ಬಳಕೆಯಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಕಟ್ಟೆಮನುಗನಹಳ್ಳಿಯ ಅಲ್ತಾಳಹುಂಡಿ ಗ್ರಾಮದ ಕಾಳಮ್ಮನವರ ದೇವಸ್ಥಾನದ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ವತಿಯಿಂದ ದೇವಸ್ಥಾನಗಳು ಮತ್ತು ಹಾಲು ಉತ್ಪಾದಕರ ಸಂಘಗಳ ನೂತನ ಕಟ್ಟಡಗಳಿಗೆ ಸಹಾಯಧನ ನೀಡಲಾಗುತ್ತಿದೆ. ಅಲ್ಲದೆ, ವೃತ್ತಿಪರ ಕೋರ್ಸ್ ಮಾಡುತ್ತಿರುವ ಸಂಘಗಳ ಸದಸ್ಯರ ಮಕ್ಕಳಿಗೆ ಸುಜ್ಞಾನನಿಧಿಯಡಿ ಶಿಷ್ಯವೇತನ, ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಯೋಜನಾಧಿಕಾರಿ ವಿ.ಭಾಸ್ಕರ್ ಮಾತನಾಡಿ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು ಸಾಮಾಜಿಕ, ಧಾರ್ಮಿಕ, ಆರ್ಥಿಕ ಸಬಲೀಕರಣಕ್ಕೆ ಕೈಜೋಡಿಸುವುದರಿಂದ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯೋಜನೆಯ ಸೌಲಭ್ಯಗಳನ್ನು ಪ್ರಸರಿಸಲು ಒಕ್ಕೂಟಗಳು ಸಹಕಾರಿ ಆಗಿವೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಕೆಂಡಗಣ್ಣಸ್ವಾಮಿ ಮಾತನಾಡಿ, ಮಹಿಳೆಯರು ಸಾವಲಂಬನೆ ಜೀವನ ನಡೆಸಬೇಕಾದರೆ ಸಂಘ-ಸಂಸ್ಥೆಗಳ ಸಹಕಾರಗಳನ್ನು ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿಗುವಂತಹ ಸಾಲ ಸೌಲಭ್ಯ ಪಡೆದು ಹೈನುಗಾರಿಕೆ, ಕೃಷಿ, ಸ್ವ-ಉದ್ಯೋಗದ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವ್ಯವಸ್ಥಾಪಕ ಭಾನುಪ್ರಕಾಶ್, ಪ್ರಧಾನ ಮಂತ್ರಿ ಜೀವನ್ ಬಿಮಾ, ಅಟಲ್ ಪಿಂಚಣಿ ಯೋಜನೆ, ವಿಮೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಯೋಜನೆ ಮೇಲ್ವಿಚಾರಕಿ ಭಾರತಿ, ಹಿರಿಯ ಉಪನ್ಯಾಸಕ ಪಾಲ್‌ರಾಜ್, ಯೋಜನೆಯ ಪ್ರಾದೇಶಿಕ ಕಚೇರಿಯ ಅಧಿಕಾರಿ ಆನಂದ್‌ಕುಮಾರ್, ಒಕ್ಕೂಟದ ಅಧ್ಯಕ್ಷ ಕೆ.ಲೋಕೇಶ್, ಕೃಷಿ ಅಧಿಕಾರಿ ಬಿ.ಜೆ.ರಾಜು, ನಾಗನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಇಂದ್ರಮ್ಮ ಮಹಾದೇವ, ಮುಖಂಡರಾದ ಸದಾಶಿವಪ್ಪ ಗೌಡಿಕೆ, ಕೆಂಡಗಣ್ಣಸ್ವಾಮಿ, ಅಂಕಶೆಟ್ಟಿ, ಅಣ್ಣಪ್ಪ ಗೀತಾ ವೀರಭದ್ರ ಸೋಮಣ್ಣ, ಜಯಶೀಲಾ ತಮ್ಮಣ್ಣ, ರಾಣಿಪ್ರಸಾದ್, ಸೋಮಣ್ಣ, ಕೆ.ವಿ.ಬಸವರಾಜಪ್ಪ, ರವಿ, ಟಿ.ನಾಗೇಶ್, ಸುದೀಪ್, ವಿಎಲ್‌ಇಗಳು, ಸೇವಾಪ್ರತಿನಿಧಿಗಳು ಸಂಘಗಳ ಸದಸ್ಯರು ಇದ್ದರು.