ಜಿಲ್ಲೆ

ಗ್ರಾಮ ಸಹಾಯಕರಿಗೆ ರಕ್ಷಣೆ ಕೊಡಿ

ಬೀದರ್: ರಾಜ್ಯದಲ್ಲಿ ಗ್ರಾಮ ಸಹಾಯಕರಿಗೆ ಆಗುತ್ತಿರುವ ಕಿರುಕುಳ ತಡೆದು, ರಕ್ಷಣೆ ಕೊಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಿ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ, ನಿರಂತರವಾಗಿ ಗ್ರಾಮ ಸಹಾಯಕರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ವಿವಿಧೆಡೆ ಕಂಡುಬರುತ್ತಿವೆ. ಹೀಗಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಗ್ರಾಮ ಸಹಾಯಕರೊಬ್ಬರಿಗೆ ಅನಾರೋಗ್ಯದ ಕಾರಣ ಅವರ ಪುತ್ರಿ ಒಂದುವರೆ ವರ್ಷದಿಂದ ತಂದೆಯ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಇವರಿಗೆ ವೇತನ ಬಿಡುಗಡೆ ಮಾಡಿರುವುದಿಲ್ಲ, ಈ ಬಗ್ಗೆ ಸಂಬಂಧಿಸಿದ ತಹಸೀಲ್ದಾರ್ ಅವರಿಗೆ ವಿಚಾರಿಸಿದರೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ದೂರಿದ್ದಾರೆ.

ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಗ್ರಾಮ ಸಹಾಯಕಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು. ಘಟನೆಗೆ ಕಾರಣರಾದ ತಹಸೀಲ್ದಾರ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಮುಂದೆ ಈ ರೀತಿ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಂಘದ ಜಿಲ್ಲಾಧ್ಯಕ್ಷ ಬಲಭೀಮ ಹುಲಿಮನಿ, ಪ್ರಮುಖರಾದ ಅಪ್ಪಣ್ಣ ಮೇತ್ರೆ, ಸುಧಾಕರ ಇಟಗಾ, ಪ್ರಕಾಶ ಮೇತ್ರೆ, ಓಂಕಾರ ಕೋನಮೇಳಕುಂದಾ, ವೀರಣ್ಣಾ ಮಚಕುರಿ, ಅಮರ ಗೋಖಲೆ, ವಾಜೀದ್ ಮಿಯ್ಯಾ, ಸಂಜು ಮಮದಾಪುರೆ, ಲಕ್ಷ್ಮಣ ಜಮಾದಾರ, ಪ್ರಶಾಂತ ರಾಂಪುರ, ದೇವದತ್ತ ಸಿಂಧೆ, ರಾಜಣ್ಣಾ ನಾಗನಕೇರಾ ಇತರರಿದ್ದರು.