ಮುಂಡರಗಿ: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಿನ ಬೀಡನಾಳ ತಾಂಡಾ ಗ್ರಾಮಸ್ಥರು ಗುರುವಾರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಜಾಲಿಕಂಟಿ ಬೇಲಿ ಹಾಕಿದ್ದಾರೆ. ಕೂಲಿ ಕೆಲಸಕ್ಕಾಗಿ ಗ್ರಾಮದಿಂದ ಬೇರೆ ಬೇರೆ ಪಟ್ಟಣಗಳಿಗೆ ತೆರಳಿದ್ದ ಗ್ರಾಮಸ್ಥರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ. ಅವರನ್ನು ತಪಾಸಣೆ ನಡೆಸಿ ವೈದ್ಯರು ಅನುಮತಿ ನೀಡಿದರೆ ಗ್ರಾಮದೊಳಗೆ ಬಿಟ್ಟುಕೊಳ್ಳುತ್ತಿದ್ದಾರೆ.
ಕಲಕೇರಿ ಗ್ರಾಮದಲ್ಲಿ ಕೆಲ ಯುವಕರು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳುವ ರಸ್ತೆಗೆ ಜಾಲಿಕಂಟಿ ಬೇಲಿ ಹಾಕಿ ಬಂದ್ ಮಾಡಿದರು. ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಡಂಗುರ ಸಾರುವ ಮೂಲಕ ಕರೊನಾ ಜಾಗೃತಿ ಮೂಡಿಸಲಾಗಿದೆ. ಗ್ರಾಮದಲ್ಲಿ ಗ್ರಾಮಸ್ಥರು ಗುಂಪು ಗುಂಪಾಗಿ ತಿರುಗಾಡುಗುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಹೊರಭಾಗದಿಂದ ಗ್ರಾಮದೊಳಗೆ ಬರುವವರನ್ನು ಕಡ್ಡಾಯವಾಗಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡು ಬರುವಂತೆ ತಿಳಿಸಲಾಗಿದೆ.
ಜನ ಸಂಚಾರ ನಿಯಂತ್ರಣಕ್ಕೆ ಲಾಠಿ ಅಸ್ತ್ರ
ಶಿರಹಟ್ಟಿ: ದಿನೇದಿನೆ ವಿಸ್ತರಿಸುವ ಮಾರಕ ಕರೊನಾ ಸೋಂಕು ನಿಗ್ರಹಿಸಿ ಜನತೆಗೆ ಆರೋಗ್ಯಭಾಗ್ಯ ನೀಡುವ ನಿಟ್ಟಿನಲ್ಲಿ ಏ. 14 ರವರೆಗೆ ದೇಶಾದ್ಯಂತ ಜಾರಿಗೊಳಿಸಿದ ಲಾಕ್ಡೌನ್ ವ್ಯವಸ್ಥೆ ಹಾಗೂ ನಿಷೇಧಾಜ್ಞೆ ಕಟ್ಟಳೆ ಗುರುವಾರ ಮೂರನೇ ದಿನಕ್ಕೆ ಕಾಲಿರಿಸಿದೆ.
ಅಮಾವಾಸೆ ಹಾಗೂ ಯುಗಾದಿ ಹಬ್ಬದ ನಿಮಿತ್ತ ಮಂಗಳವಾರ ಸ್ಥಳೀಯ ಹಾಗೂ ಸುತ್ತಮುತ್ತ ಲಿನ ಗ್ರಾಮಗಳ ಜನರಿಂದ ಪೂಜಾ ಸಾಮಗ್ರಿ ಖರೀದಿ ಜೋರಾಗಿ ನಡೆದಿತ್ತು. ನಂತರ ವ್ಯಾಪಾರಿಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ ಬಳಿಕ ಅಂಗಡಿ ಬಂದ್ ಆದವು.
ಗುರುವಾರ ಬೆಳಗ್ಗೆ ಮತ್ತದೇ ವರ್ತನೆ ಕಂಡುಬಂದಿದ್ದರಿಂದ ಸಶಸ್ತ್ರ ಪೊಲೀಸರು ಪಡೆ ಸಿಬ್ಬಂದಿ ತಮ್ಮ ಲಾಠಿ ಅಸ್ತ್ರ ಪ್ರಯೋಗಿಸಲು ಮುಂದಾದರು. ಪಟ್ಟಣದ ಗಲ್ಲಿ ಗಲ್ಲಿಯಲ್ಲಿ ಸಂಚರಿಸಿ ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಹರಟೆ ಹೊಡೆಯುತ್ತಿದ್ದವರತ್ತ ಲಾಠಿ ಬೀಸುತ್ತ ಅವರನ್ನು ಚದುರಿಸುವ ಮೂಲಕ ಕರ್ಫ್ಯೂ ಬಗೆಗಿನ ಉದಾಸೀನ ಧೋರಣೆಗೆ ಪಾಠ ಕಲಿಸಿದರು.
ಹಾಲು, ಔಷಧಿ ಮಾರಾಟ ಮಳಿಗೆಗಳು ಹೊರತುಪಡಿಸಿ ದಿನಸಿ, ಹಣ್ಣು, ಹೂವು ವ್ಯಾಪಾರದ ಅಂಗಡಿಗಳು ಮುಚ್ಚಿದ್ದವು. ಬಸ್ನಿಲ್ದಾಣ, ಬ್ಯಾಂಕುಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.
ರಸ್ತೆ ಅಗೆದು ಮುಳ್ಳಿನ ಕಂಟಿ ಇಟ್ಟರು!
ಹೊಳೆಆಲೂರ: ಗ್ರಾಮದ ಮಲಪ್ರಭಾ ಸೇತುವೆ ಹತ್ತಿರ ಬಾದಾಮಿ-ಹೊಳೆಆಲೂರ ಸಂರ್ಪಕಿಸುವ ರಸ್ತೆ, ಪವಾರ್ ಪೆಟ್ರೋಲ್ ಪಂಪ್ ಹತ್ತಿರದ ಹೊಳೆಆಲೂರ-ಕೊಣ್ಣೂರ ಸಂರ್ಪಸುವ ರಸ್ತೆ ಅಗೆದು ಮುಳ್ಳಿನ ಕಂಟಿ ಹಚ್ಚಿ ಯಾವುದೇ ವಾಹನಗಳು ಗ್ರಾಮ ಪ್ರವೇಶಿಸದಂತೆ ಹಾಗೂ ಹೊರಹೋಗದಂತೆ ಗ್ರಾಪಂನವರು ವ್ಯವಸ್ಥೆ ಮಾಡಿದ್ದಾರೆ.
ಹುನಗುಂಡಿ ಗ್ರಾಮಸ್ಥರು ಗ್ರಾಮದ ಸುತ್ತಲಿನ ಸಂಪರ್ಕವನ್ನು ತಡೆಯಲು ರಸ್ತೆಗಳಿಗೆ ಮುಳ್ಳಿನ ಕಂಟಿ ಹಾಕಿದ್ದಾರೆ. ಕುರುವಿನಕೊಪ್ಪದ ಗ್ರಾಮಸ್ಥರು ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ. ಸ್ಥಳೀಯ ಗ್ರಾಪಂ ನೇತೃತ್ವದಲ್ಲಿ ಪ್ರತಿ ವಾರ್ಡಿಗೆ ತರಕಾರಿಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಗ್ರಾಪಂ, ರೈಲ್ವೆ ಸ್ಟೇಷನ್, ಆಲೂರ ವೆಂಕಟರಾಯ ಭವನದ ಹತ್ತಿರ ಬೆಳಗ್ಗೆ 7ರಿಂದ 10ರವರೆಗೆ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳೂರು, ಬೆಂಗಳೂರು, ಗೋವಾಗಳಿಗೆ ದುಡಿಯಲು ಹೋಗಿದ್ದ ಜನರು ಗ್ರಾಮಕ್ಕೆ ಆಗಮಿಸುತ್ತಿದ್ದು, ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಗಾ›ಪಂನಿಂದ ಡಂಗುರ ಸಾರಿ ಗ್ರಾಮಕ್ಕೆ ಬೇರೆ ಊರಿನಿಂದ ಬಂದ ಜನರ ಬಗ್ಗೆ ಹೊಸಬರ ಬಗ್ಗೆ ಮಾಹಿತಿ ನೀಡಲು ತಿಳಿಸಲಾಗಿದೆ.
ಗ್ರಾಮದ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬುಧವಾರ ರಾತ್ರಿ ಮತ್ತು ಗುರುವಾರ ಮಧ್ಯಾಹ್ನ ಲಾಠಿ ಬೀಸಿ ಓಡಿಸಿದ್ದಾರೆ. ಜನಸಾಮಾನ್ಯರಿಗೆ ಅಗತ್ಯ ಮೂಲಸೌಲಭ್ಯಗಳಾದ ದಿನಸಿ ಹಾಗೂ ತರಕಾರಿ ಕೊರತೆಯಾಗದಂತೆ ಗದಗ ಹಾಗೂ ಬದಾಮಿಯಿಂದ ತರಿಸಿಕೊಳ್ಳಲು ಗ್ರಾಪಂನಿಂದ ಅಧಿಕೃತ ಪಾಸ್ ಪಡೆದು ಸಂಚರಿಸಲು ಕೆಲ ಗೂಡ್ಸ್ ಗಾಡಿಗಳಿಗೆ ಅನುಮತಿ ನೀಡಲಾಗಿದೆ. ಹೊಳೆಆಲೂರ, ಹುನಗುಂಡಿ, ಕುರುವಿನಕೊಪ್ಪ, ಅಮರಗೋಳ, ಮೆಣಸಗಿ, ಗಾಡಗೋಳಿ, ಹೊಳೆಮಣ್ಣೂರ. ಬೆನಹಾಳ ಸೇರಿ ಎಲ್ಲ ಗ್ರಾಮಗಳ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ದಿಗ್ಭಂಧನ ಹಾಕಿಕೊಳ್ಳುತ್ತಿದ್ದಾರೆ.