ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಗ್ರಾಮ ಸಂಪರ್ಕ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಮಾತನಾಡಿ, ದೇಶದ ಜನರು ಬೆಲೆ ಏರಿಕೆ, ಮಿತಿ ಮೀರಿದ ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ತತ್ತರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರ ತೆರಿಗೆಯನ್ನು ಸದುಪಯೋಗ ಪಡಿಸಿಕೊಂಡು ಅತ್ಯುತ್ತಮ ಹಾಗೂ ಮಾದರಿ ಆಡಳಿತ ನೀಡುತ್ತಿರುವ ಆಮ್ ಆದ್ಮಿ ಪಕ್ಷವು ಜನರಿಗೆ ಆಶಾಕಿರಣವಾಗಿ ಗೋಚರಿಸಿದೆ. ಪಕ್ಷದ ಸಾಧನೆಗಳ ಹಾಗೂ ವಿಚಾರಧಾರೆಯನ್ನು ಮನೆಮನೆಗೂ ಮುಟ್ಟಿಸುವ ಕೆಲಸ ಆಗಬೇಕಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರಿಗೆ ವಿವರವಾಗಿ ಗ್ರಾಮ ಪಂಚಾಯಿತಿ ಅಭಿಯಾನದ ರೂಪುರೇಷೆ ಮತ್ತು ಅಭಿಯಾನವನ್ನು ಅನುಷ್ಠಾನಗೊಳಿಸುವ ಬಗ್ಗೆ ತಿಳಿಸಿದರು.
ಚಾಮರಾಜನಗರದಲ್ಲಿ ಈ ಹಿಂದೆ ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಇನ್ನೂ ಸರಿಯಾದ ಪರಿಹಾರ ದೊರೆತಿರುವುದಿಲ್ಲ. ಈ ಬಗ್ಗೆ ಜಿಲ್ಲೆಯಲ್ಲಿ ಹೋರಾಟ ರೂಪಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಪಕ್ಷದ ಜಿಲ್ಲಾ ಸಂಯೋಜಕ ಅಬ್ದುಲ್ ರಜಾಕ್, ಮೈಸೂರು ಜಿಲ್ಲಾ ಉಸ್ತುವಾರಿ ರಂಗಯ್ಯ, ಗ್ರಾಮ ಸಂಪರ್ಕ ಅಭಿಯಾನ ಸಂಯೋಜಕ ಕೆಂಪರಾಜು, ಕಾರ್ಯಕರ್ತರಾದ ಉಮಾಶಂಕರ್, ಪ್ರಭುಸ್ವಾಮಿ, ಚೇತು, ಶೇಖರ್, ವಾಸು, ನಟೇಶ, ಚಾಮುಂಡಿ, ಕೈಲಾಸಮೂರ್ತಿ ಮತ್ತಿತರಿದ್ದರು.