ಚಿಕ್ಕಬಳ್ಳಾಪುರ: ಗ್ರಾಮೀಣ ಜನರೊಂದಿಗೆ ಚರ್ಚೆ, ಸರ್ಕಾರಿ ಸವಲತ್ತು ವಿತರಣೆ, ಯೋಗ ಮತ್ತು ಕ್ರೀಡೆಗಳಲ್ಲಿ ಭಾಗಿ, ಮನರಂಜನೆ, ಜನರ ಅಹವಾಲು ಸ್ವೀಕಾರ ಸೇರಿ ವಿವಿಧ ಚಟುವಟಿಕೆಗಳ ಮೂಲಕ ತಾಲೂಕಿನ ಹೊಸಹುಡ್ಯದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಗ್ರಾಮ ವಾಸ್ತವ್ಯ ಯಶಸ್ವಿಯಾಗಿ ನಡೆಯಿತು.
ಮೊದಲ ದಿನವಾದ ಶನಿವಾರ ಗ್ರಾಮದ ವಿವಿಧೆಡೆ ಭೇಟಿ, ಸವಲತ್ತು ವಿತರಣೆ ಮತ್ತು ಜನರ ಅಹವಾಲು ಸ್ವೀಕಾರ, ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕಾರ್ಯಕ್ರಮಗಳ ಬಳಿಕ ರಾತ್ರಿ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮದ ಲಕ್ಷ್ಮೀನರಸಿಂಹಮೂರ್ತಿ ಎಂಬುವವರ ಮನೆಯಲ್ಲಿ ಭೋಜನ ಸವಿದರು.
ಮರುದಿನ ಭಾನುವಾರ ಬೆಳಗ್ಗೆ ಯೋಗಾಭ್ಯಾಸದೊಂದಿಗೆ ಸಚಿವರಾದಿಯಾಗಿ ಅಧಿಕಾರಿಗಳು ಗ್ರಾಮ ವಾಸ್ತವ್ಯ ಪ್ರಾರಂಭಿಸಿದರು. ಪ್ರತಿದಿನ ಯೋಗ, ಧ್ಯಾನದಿಂದಾಗುವ ಅನುಕೂಲ, ಅರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಬಳಿಕ ಗ್ರಾಮದ ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಸ್ಥಳೀಯ ಯುವಕರೊಂದಿಗೆ ಸಚಿವರು ಕ್ರಿಕೆಟ್ ಆಡಿದರು. ಎಸ್ಪಿ ಜಿ.ಕೆ.ಮಿಥುನ್ ಬೌಲಿಂಗ್ ಮಾಡಿ ಗಮನ ಸೆಳೆದರು. ಸ್ಥಳೀಯ ಯುವಕರು ಸಚಿವರನ್ನು ಪೈಪೋಟಿಯಲ್ಲಿ ಔಟ್ ಮಾಡಲು ಪ್ರಯತ್ನಿಸಿ ವಿಫಲರಾದರು.
ಹೆಣ್ಣೂರು ಕದಿರೇನಹಳ್ಳಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಅಟಲ್ ಭೂ ಜಲ ಯೋಜನೆಯ ಜಾಗೃತಿ ನಾಟಕ ವೀಕ್ಷಿಸಲಾಯಿತು. ತುಮಕೂರಿನ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಲಾವಿದರು ನೀರಿನ ಸಂರಕ್ಷಣೆ, ವನಸಂರಕ್ಷಣೆ, ಇಂಗುಗುಂಡಿ ನಿರ್ಮಾಣ, ಮಳೆ ಕೊಯ್ಲು ಪದ್ಧತಿ, ಚೆಕ್ ಡ್ಯಾಂ ನಿರ್ಮಾಣ, ಮಿತ ನೀರಿನ ಬಳಕೆ, ಹನಿ ನೀರಾವರಿ, ಪರಿಸರ ಸಂರಕ್ಷಣೆ ಕುರಿತು ಮತ್ತು ಅಟಲ್ ಭೂ ಯೋಜನೆ ಕುರಿತು ನಾಟಕ ಪ್ರದರ್ಶನದ ಮೂಲಕ ಗಮನ ಸೆಳೆದರು.ಸಚಿವರ ನೇತೃತ್ವದ ತಂಡವು ಚಿಕ್ಕಕಿರುಗಂಬಿ ಮತ್ತು ಎಲೆಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿತು. ಇನ್ನು ಗ್ರಾಮ ವಾಸ್ತವ್ಯದಲ್ಲಿ ಸ್ವತಃ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹಾಡು ಹಾಡಿ ಜನರನ್ನು ರಂಜಿಸಿದರು.
50 ಸಾವಿರ ಉದ್ಯೋಗಾವಕಾಶ: ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗುವ ವಿಶ್ವಾಸವಿದ್ದು, ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಯಿಂದ ಸುಮಾರು 50 ಸಾವಿರ ಯುವ ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಭರವಸೆ ಇದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಅಂತರ್ಜಲಮಟ್ಟ ವೃದ್ಧಿಗೆ ಕ್ರಮ: ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಜಿಲ್ಲೆಯ ಕೆರೆಗಳಿಗೆ ವಿವಿಧ ಯೋಜನೆಗಳಡಿ ನೀರು ಹರಿಸಿ ಅಂತರ್ಜಲಮಟ್ಟ ಹೆಚ್ಚಿಸುವ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ನೀರಿನ ಕೊರತೆ ನೀಗಿಸುವುದರ ಜತೆಗೆ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ ಈಗಾಗಲೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಂದರಲ್ಲಿಯೇ ನಾಲ್ಕು ಸಾವಿರ ಎಕರೆ ಭೂಮಿ ಗುರುತಿಸಿದೆ. ಜಿಲ್ಲೆಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಬೃಹತ್ ಕೈಗಾರಿಕೆಗಳು ತಲೆ ಎತ್ತುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.