ಜಿಲ್ಲೆ

ಗ್ರಾಮ ವಾಸ್ತವ್ಯಕ್ಕೆ ಜಿಲ್ಲಾಡಳಿತ ಸಿದ್ಧತೆ: ಚಿಕ್ಕಬಳ್ಳಾಪುರದ ಹೊಸಹುಡ್ಯದಲ್ಲಿ ಡಿಸಿ ವಾಸ್ತವ್ಯ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕರೊನಾ ನಿಯಂತ್ರಣದ ಬಳಿಕ ಆಡಳಿತ ಯಂತ್ರಾವು ಗ್ರಾಮೀಣ ಜನರ ಮನೆ ಬಾಗಿಲಿಗೆ ತೆರಳಿ ಸವಲತ್ತು ಒದಗಿಸುವ ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ ಅಭಿಯಾನ ಮರು ಪ್ರಾರಂಭವಾಗಿದ್ದು, ಗ್ರಾಮ ವಾಸ್ತವ್ಯಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

2021ನೇ ಸಾಲಿನ ನವೆಂಬರ್‌ನಲ್ಲಿ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯಲ್ಲಿ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ ಅವರು ದಲಿತರ ಮನೆಯಲ್ಲಿ ಭೋಜನ, ಜನರೊಂದಿಗೆ ಗ್ರಾಮ ಸಂಚಾರ, ಅಹವಾಲು ಸ್ವೀಕಾರ ಮತ್ತು ಸವಲತ್ತು ವಿತರಣೆಯ ಮೂಲಕ ಗ್ರಾಮ ವಾಸ್ತವ್ಯ ಮಾಡಿದ್ದರು. ಈ ಹಿಂದೆ ಶಿಡ್ಲಘಟ್ಟ ತಾಲೂಕಿನ ಬೋಧಗೂರು, ಗುಡಿಬಂಡೆ ತಾಲೂಕಿನ ಹಂಪಸಂದ್ರದಲ್ಲಿ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಇದೀಗ ಫೆ.19ರಂದು ಹೊಸಹುಡ್ಯದಲ್ಲಿ ಉಳಿದುಕೊಂಡು, ಜನರ ಸಮಸ್ಯೆ ಆಲಿಸುವ ಗ್ರಾಮ ವಾಸ್ತವ್ಯಕ್ಕೆ ಅಗತ್ಯ ಸಿದ್ಧತೆಗಳಲ್ಲಿ ಜಿಲ್ಲಾಡಳಿತ ತೊಡಗಿದೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು. ಫೆ.19ರಂದು ಹೊಸಹುಡ್ಯದಲ್ಲಿ ಜಿಲ್ಲಾಡಳಿತದ ಹಾಗೂ ತಾಲೂಕು ಮಟ್ಟದ ಆಡಳಿತದ ಎಲ್ಲ ಅಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಸ್ಥಳದಲ್ಲಿಯೇ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಸಿ ಸಂತೋಷ್ ಕುಮಾರ್ ಮತ್ತಿತರರು ಇದ್ದರು.

ಅಗತ್ಯ ಸಿದ್ಧತೆಗೆ ಸೂಚನೆ: ಗ್ರಾಮ ವಾಸ್ತವ್ಯದ ದಿನದಂದು ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಕೃಷಿ ವಸ್ತು ಪ್ರದರ್ಶನ ನಡೆಯಲಿದೆ. ಸರ್ಕಾರಿ ಯೋಜನೆಗಳ ಜಾಗೃತಿ ಮತ್ತು ಅನುಷ್ಠಾನಕ್ಕಾಗಿ ಮಾಹಿತಿ ಕೇಂದ್ರ, ಅರ್ಜಿ ಸ್ವೀಕಾರ ಕೇಂದ್ರ ಮತ್ತು ಮಳಿಗೆಗಳನ್ನು ತೆರೆಯಲು ಜಿಲ್ಲಾಧಿಕಾರಿ ಆರ್.ಲತಾ ಸಿಬ್ಬಂದಿಗೆ ಸೂಚಿಸಿದರು. ಸಾಮಾಜಿಕ ಭದ್ರತೆ, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆ, ಇ-ಶ್ರಮ್, ಪಡಿತರ, ಎಸ್‌ಸಿಪಿ ಮತ್ತು ಟಿಎಸ್‌ಪಿ, ಪೋಡಿ, ಹದ್ದುಬಸ್ತು, ಆಧಾರ್, ಪೌತಿ ಖಾತೆ, ಪಹಣಿ ದೋಷ ತಿದ್ದುಪಡಿ, ಆಶ್ರಯ ವಸತಿ ಸೇರಿ ಸರ್ಕಾರದ ವಿವಿಧ ಯೋಜನೆಯಡಿ ಹೊಸಹುಡ್ಯ ಗ್ರಾಪಂ ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆಗೆ ಸಿದ್ಧತೆಯ ಮಾಹಿತಿ ಪಡೆದರು.

ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ, ಸ್ಥಳೀಯರ ಅಹವಾಲು ಹಾಗೂ ಅರ್ಜಿ ಸ್ವೀಕರಿಸಬೇಕು. ಸ್ಥಳದಲ್ಲೇ ಇತ್ಯರ್ಥಪಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಸರ್ಕಾರದ ವಿವಿಧ ಯೋಜನೆಗಳಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮಂಜೂರಾತಿ ಪತ್ರದ ಪಟ್ಟಿಯನ್ನು ಪರಿಶೀಲಿಸಿದರು.