ಜಿಲ್ಲೆ

ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಣೆ

ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಶನಿವಾರ ಲ್ಯಾಪ್‌ಟಾಪ್‌ಗಳನ್ನು ವಿತರಣೆ ಮಾಡಿದರು.

ಸಂತೇಮರಹಳ್ಳಿ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲ್ಯಾಪ್‌ಟಾಪ್ ವಿತರಿಸಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ಇಲಾಖೆಗೆ ಒಳಪಡುವ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ, ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕು. ಇಲಾಖೆಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳನ್ನು ಇತ್ಯರ್ಥ ಪಡಿಸುವಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಇತ್ತೀಚಿನ ದಿನಗಳಲ್ಲಿ ಕಂದಾಯ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳು ಡಿಜಿಟಲೀಕರಣವಾಗಿದ್ದು, ಇದನ್ನು ಮನಗೊಂಡು ಕರ್ನಾಟಕ ಸರ್ಕಾರ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಿ ರೈತರಿಗೆ ಎಲ್ಲಾ ರೀತಿ ಸೌಲಭ್ಯ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮುಂಡಿ ನಿರ್ದೇಶಕ ತರೋಡಿ ರೇವಣ್ಣ, ತಹಸೀಲ್ದಾರ್ ಗಿರಿಜಾ, ಉಪ ತಹಸೀಲ್ದಾರ್ ನಾಗಲಾಂಬಿಕ, ಆರ್.ಐ ಸತೀಶ್, ಸುರೇಶ್, ಬೂದಂಬಳ್ಳಿ ಶಂಕರ್, ಶಂಕರ್ ಮೂರ್ತಿ ಹಾಗೂ ಇತರರು ಹಾಜರಿದ್ದರು.