ಜಿಲ್ಲೆ

ಗ್ರಾಮ ಪಂಚಾಯಿತಿಗಳಲ್ಲಿ ನಿವೇಶನ ಗುರುತಿಸಿ ವಿತರಿಸಿ

ಎಸ್.ಎನ್.ರವೀಂದ್ರ

ಮೂಡಿಗೆರೆ: ತಾಲೂಕಿನ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಬೇಡಿಕೆಯಿದೆ. ಜಾಗ ಗುರುತಿಸಿ ಫಲಾನುಭವಿಗಳಿಗೆ ನಿವೇಶನ ನೀಡಬೇಕು. ಸ್ಮಶಾನ, ಗೋಮಾಳ ಜಾಗ, ಆಟದ ಮೈದಾನಗಳನ್ನು ಸರ್ವೇ ಮಾಡಿ ಪಕ್ಕಾಪೋಡಿ ಮಾಡಬೇಕು. ವಸತಿ ಪ್ರದೇಶ ಮತ್ತು ನಿವೇಶನಗಳಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಹಂಗರ್ ಪ್ರಾಜೆಕ್ಟ್ ಮತ್ತು ಸುಗ್ರಾಮ ಗ್ರಾಪಂ ಮಹಿಳಾ ಸದಸ್ಯರು ತಹಸೀಲ್ದಾರ್ ರಾಜಶೇಖರಮೂರ್ತಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಹಳೇಮೂಡಿಗೆರೆ ಗ್ರಾಮದ ಸ.ನಂ7ರಲ್ಲಿ 3.34 ಎಕರೆ ಜಾಗವನ್ನು ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಅಲ್ಲಿಗೆ ರಸ್ತೆ ಇಲ್ಲದ ಕಾರಣ ಹೊಸದಾಗಿ ಜಾಗ ಗುರುತಿಸಿ ರಸ್ತೆ ನಿರ್ಮಿಸಬೇಕು. ಬಾಳೂರು ಎಸ್ಟೇಟ್ ಗ್ರಾಮದ ಸ.ನಂ 230ರಲ್ಲಿ 2 ಎಕರೆ ಜಾಗ ನಿವೇಶನಕ್ಕೆ ಮಂಜೂರಾಗಿದೆ. ಪಕ್ಕಾಪೋಡಿ ಮಾಡಬೇಕು. ಹೆಸಗಲ್ ಗ್ರಾಮದ ಸ.ನಂ 71 ರಲ್ಲಿ 1.14 ಎಕರೆ, ಸ.ನಂ 78 ರಲ್ಲಿ 1.37 ಎಕರೆ, ಸ.ನಂ 19 ರಲ್ಲಿ 4.27 ಎಕರೆ ಜಾಗದಲ್ಲಿ ಸರ್ಕಾರಿ ಕೆರೆಗಳಿವೆ. ಅದನ್ನು ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ಖುಲ್ಲಾಗೊಳಿಸಬೇಕು. ಹೆಸಗಲ್ ಗ್ರಾಪಂ ವ್ಯಾಪ್ತಿಯಲ್ಲಿ 26 ಕಡೆ ಭೂಕುಸಿತ ಉಂಟಾಗಿದೆ. ಅಲ್ಲಿಗೆ ತಡೆಗೋಡೆ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಹೆಸಗಲ್ ಸ.ನಂ 71ರಲ್ಲಿ ಉರ್ದು ಶಾಲೆಗೆಂದು ದಾನಿಯೊಬ್ಬರು ನೀಡಿದ ಜಾಗವನ್ನು ಸರ್ವೇ ನಡೆಸಿ ಹದ್ದುಬಸ್ತು ಮಾಡಬೇಕು. ಹೆಸಗಲ್ ಸ.ನಂ 3 ಮತ್ತು 4 ರಲ್ಲಿ 34 ಗುಂಟೆ ಜಾಗದಲ್ಲಿ 60 ಮನೆಗಳಿವೆ. ಅಲ್ಲಿನ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು. ಹೆಸಗಲ್ ಗ್ರಾಮದ ವಿವೇಕಾನಂದ ನಗರದ ಆಟದ ಮೈದಾನ ಮತ್ತು ಸ್ಮಶಾನ ಜಾಗವನ್ನು ಹದ್ದುಬಸ್ತು ಮಾಡಬೇಕು. ಚಿನ್ನಿಗ ಗ್ರಾಪಂ ವ್ಯಾಪ್ತಿಯ ಹೊಯ್ಸಳಲು, ವಾಟಳ್ಳಿ ರಸ್ತೆ ದುರಸ್ತಿ ಪಡಿಸಬೇಕು. ಕಿರುಗುಂದ ಗ್ರಾಪಂ ವ್ಯಾಪ್ತಿಯ ಹೆಗ್ಗರವಳ್ಳಿ ಸ.ನಂ 49ರ ಗೋಮಾಳ ಜಾಗವನ್ನು ಗ್ರಾಪಂನಿಂದ ನಿವೇಶನವನ್ನಾಗಿ ಮಾಡಿ 40 ಫಲಾನುಭವಿಗಳಿಗೆ ಹಂಚಲಾಗಿದೆ. ಆ ಜಾಗದ ಪಹಣಿಯಲ್ಲಿ ಈಗ ಹೊಸದಾಗಿ ಡೀಮ್ಡ್ ಫಾರೆಸ್ಟ್ ಎಂದು ನಮೂದಾಗಿದೆ. ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಗೋಣಿಬೀಡು ಗ್ರಾಪಂ ವ್ಯಾಪ್ತಿಯ ಜಿ.ಅಗ್ರಹಾರ ಗ್ರಾಮದ ಸ.ನಂ 67ರಲ್ಲಿ ನಿವೇಶನ ಹಾಗೂ ಸ.ನಂ 65ರಲ್ಲಿರುವ ಖಾಲಿ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಬೇಕು. ತರುವೆ, ಅತ್ತಿಗೆರೆ, ಬಿನ್ನಡಿ ಗ್ರಾಮಗಳಲ್ಲಿರುವ ಸ್ಮಶಾನ ಜಾಗವನ್ನು ಹದ್ದುಬಸ್ತು ಮಾಡಬೇಕು. ತರುವೆ ಗ್ರಾಮದಲ್ಲಿರುವ 4 ಕೆರೆಗಳ ಗಡಿ ಗುರುತಿಸಬೇಕು. ಬಿದರಹಳ್ಳಿಯಲ್ಲಿರುವ ಸ್ಮಶಾನ ಜಾಗದ ದಾಖಲಾತಿ ಒದಗಿಸಬೇಕು. ಕೆಂಜಿಗೆ ಗ್ರಾಮದಲ್ಲಿ ವಾಸವಾಗಿರುವ ಕುಟುಂಬದವರಿಗೆ 94 ಸಿಯಲ್ಲಿ ಹಕ್ಕು ಪತ್ರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ವೀಕರಿಸಿದ ತಹಸಿಲ್ದಾರ್ ರಾಜಶೇಖರಮೂರ್ತಿ ಮಾತನಾಡಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದರು.

ಸುಗ್ರಾಮ ಗ್ರಾಪಂ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಅಧ್ಯಕ್ಷೆ ಸಿ.ಎನ್.ರಾಧಾ, ವಿವಿಧ ಗ್ರಾಪಂಗಳ ಅಧ್ಯಕ್ಷರಾದ ಡಿ.ರಂಜಿತಾ, ನಜ್ಮಾ ಬೇಗಂ, ಸ್ವಾತಿಶ್ರೀ, ಸುಶೀಲಾ, ಕೆ.ಆರ್.ಗೀತಾ, ಸದಸ್ಯರಾದ ಅಂಬಿಕಾ, ಜ್ಯೋತಿ ಸಲ್ದಾನಾ, ಸುನೀತಾ, ಸೋನಿಯಾ ಕ್ರಾಸ್ತ, ಕೋಮಲಾ, ಭಾಗ್ಯಾ, ಜಯಲಕ್ಷ್ಮೀ, ಸುಗ್ರಾಮ, ಹಂಗರ್ ಪ್ರಾಜೆಕ್ಟ್ ಸಂಯೋಜಕ ನವೀನ್‌ಕುಮಾರ್ ಇತರರಿದ್ದರು.