ಚಾಮರಾಜನಗರ: ಕೇಂದ್ರ ಸರ್ಕಾರ ಪಾರ್ಲಿಮೆಂಟ್‌ನಲ್ಲಿ ನಾಲ್ಕು ಲೇಬರ್‌ಕೋಡ್‌ಗಳನ್ನು ಅಂಗೀಕರಿಸಿ ಕಾರ್ಮಿಕ ವಿರೋಧಿ ಅಂಶಗಳನ್ನು ಜಾರಿಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಚಾಮರಾಜನಗರ ತಾಲೂಕು ಘಟಕ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಗ್ರಾಮ ಪಂಚಾಯಿತಿ ನೌಕರರು ತಾಲೂಕು ಪಂಚಾಯಿತಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದೇ ವೇಳೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮ್ಮನಪುರ ಸುರೇಶ್ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ನೌಕರರು, ಸರ್ಕಾರ ಕಾನೂನು ತಿದ್ದುಪಡಿಗಳನ್ನು ಜಾರಿಗೊಳಿಸಿದ್ದಲ್ಲಿ ಕೆಲಸಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ 4 ಲೇಬರ್‌ಕೋಡ್‌ಗಳನ್ನು ಜಾರಿ ಮಾಡಬಾರದೆಂದು ಒತ್ತಾಯಿಸಿದರು.
ಕನಿಷ್ಠ ವೇತನ 31 ಸಾವಿರ ರೂ.ನಿಗದಿಪಡಿಸಬೇಕು. ಸೇವಾ ಹಿರಿತನಕ್ಕೆ ಭತ್ಯೆ ಹೆಚ್ಚಳ ಮಾಡಬೇಕು. ಪಿಂಚಣಿ ಸೌಲಭ್ಯ ನೀಡಬೇಕು. ಆರೋಗ್ಯ ವಿಮೆ ಜಾರಿಗೊಳಿಸಬೇಕು. ಪಂಚಾಯಿತಿಗೊಂದು ಎಸ್ ಡಿಎ ಮತ್ತು ಎರಡನೇ ಡಿಇಓ ನೇಮಕಾತಿ ಮತ್ತು ಸ್ವಚ್ಛ ವಾಹಿನಿಯರ ಒಡಂಬಡಿಕೆ ರದ್ದು ಸಿಂಗಲ್ ಚಾಲಕರನ್ನು ಪರಿಗಣಿಸಿ 15 ಸಾವಿರ ರೂ. ಗೌರವ ಧನ ನೀಡಬೇಕೆಂದು ತಿಳಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕೃಷ್ಣ, ಕಾರ್ಯದರ್ಶಿ ನಂದೀಶ್, ನೌಕರರಾದ ಅಭಿಲಾಶ್, ಬಸವರಾಜು, ಕುಮಾರ್, ಶಿವಕುಮಾರ್ ಇತರರು ಇದ್ದರು.