ಜಿಲ್ಲೆ

ಗ್ರಾಮ ಪಂಚಾಯಿತಿ ದತ್ತು ಆಂದೋಲನ

ಚಾಮರಾಜನಗರ: ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವಾಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳನ್ನು ದತ್ತು ಪಡೆಯುವ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಬಾಲ್ಯವಿವಾಹ ಮುಕ್ತ ಜಿಲ್ಲೆ ೋಷಣೆಗೆ ರಾಜ್ಯದಲ್ಲಿಯೇ ಮಾದರಿಯಾಗುವಂತೆ ಮಾ.1 ರಿಂದ ನ.17 ರವರೆಗೆ ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳನ್ನು ಬಾಲ್ಯವಿವಾಹ ಮುಕ್ತಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಂಡಿದೆ. ಅದರಂತೆ ಗ್ರಾಮ ಪಂಚಾಯಿತಿ ದತ್ತು ಆಂದೋಲನವನ್ನು ಪ್ರಾರಂಭಿಸಿದ್ದು, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರನ್ನು ಒಳಗೊಂಡಂತೆ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಒಂದೊಂದು ಗ್ರಾಮ ಪಂಚಾಯಿತಿಗಳನ್ನು ದತ್ತು ಸ್ವೀಕರಿಸಬೇಕಿದೆ. ಆ ಗ್ರಾಮ ಪಂಚಾಯಿತಿಯಲ್ಲಿ ಬಾಲ್ಯವಿವಾಹಗಳು ನಡೆಯದಂತೆ ಗಮನಹರಿಸಬೇಕಿದೆ.

ವಿಶೇಷವಾಗಿ ಆ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ನಿಷೇಧ ಕಾನೂನಿನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ, ಬೀದಿ ನಾಟಕ, ಸಾರ್ವಜನಿಕ ಸ್ಥಳ, ಕಟ್ಟಡ ಹಾಗೂ ಇನ್ನಿತರೆ ಕಡೆಗಳಲ್ಲಿ ಬಾಲ್ಯವಿವಾಹ ನಿಷೇಧದ ಬೋರ್ಡ್ ಮತ್ತು ಸ್ಟಿಕ್ಕರ್‌ಗಳನ್ನು ಅಳವಡಿಸುವುದು ಹಾಗೂ ಇನ್ನಿತರೆ ವಿಭಿನ್ನವಾದ ಕಾರ್ಯಕ್ರಮವನ್ನು ಆಯೋಜನೆ ಮಾಡುವಂತೆ ಅವರಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ನಿಟ್ಟಿನಲ್ಲಿ ನ.17 ರವರೆಗೆ ಗ್ರಾಮ ಮಟ್ಟದಲ್ಲಿ ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಸಂಬಂಧ ವಿಭಿನ್ನವಾದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕೂಡ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕಿದೆ.

ಪಂಚಾಯಿತಿ ದತ್ತು ಆಂದೋಲನ:

ಜಿಲ್ಲೆಯಲ್ಲಿ ಚಾಮರಾಜನಗರ, ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿದ್ದು, ಗ್ರಾ.ಪಂ ದತ್ತು ಆಂದೋಲನ ಶುರುವಾಗಿದೆ. ಈ ಆಂದೋಲನದಲ್ಲಿ ಪ್ರತಿಯೊಬ್ಬ ಅಧಿಕಾರಿಗಳನ್ನು ಒಂದು ಗ್ರಾಮ ಪಂಚಾಯಿತಿಗೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುತ್ತಿದೆ. ಬಾಲ್ಯ ವಿವಾಹ ನಿಷೇಧ ಸಂಬಂಧ ಪ್ರತಿ ವಾರಕ್ಕೊಂದು ಸಭೆ ನಡೆಸಿ, ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ತಳಮಟ್ಟದಲ್ಲಿ ಬಾಲ್ಯವಿವಾಹವನ್ನು ತಡೆಯುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಅವರು ವಿಜಯವಾಣಿಗೆ ಮಾಹಿತಿ ನೀಡಿದರು.

ಸದಸ್ಯರಿಂದಲೇ ದತ್ತು:

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಅವರು ಒಂದು ಗ್ರಾಮ ಪಂಚಾಯಿತಿಯನ್ನು ದತ್ತು ಸ್ವೀಕರಿಸಿ, ಆ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಲ್ಯವಿವಾಹಗಳು ಜರುಗದಂತೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಪುರ ಗ್ರಾಮ ಪಂಚಾಯಿತಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಈಗಾಗಲೇ ಪಂಚಾಯಿತಿ ಮಟ್ಟದಲ್ಲಿ ಸಭೆಯನ್ನು ನಡೆಸಿ, ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಿದ್ದಾರೆ. ಒಟ್ಟಾರೆಯಾಗಿ ನ.17 ರೊಳಗೆ ಹೆಚ್ಚಿನ ಗ್ರಾಮ ಪಂಚಾಯಿತಿಗಳನ್ನು ಬಾಲ್ಯವಿವಾಹ ಮುಕ್ತ ಎಂದು ೋಷಿಸುವ ಉದ್ದೇಶವನ್ನು ಹಾಕಿಕೊಳ್ಳಲಾಗಿದೆ.

ಈ ವರ್ಷ 97 ಬಾಲ್ಯವಿವಾಹಕ್ಕೆ ತಡೆ:

ಜಿಲ್ಲೆಯ ಮಕ್ಕಳ ರಕ್ಷಣಾ ಘಟಕ ನೀಡಿರುವ ಮಾಹಿತಿಯ ಪ್ರಕಾರ 2024-25 ನೇ ಸಾಲಿನಲ್ಲಿ ಈ ವರಗೆ ಚಾಮರಾಜನಗರ ತಾಲೂಕಿನಲ್ಲಿ 36, ಗುಂಡ್ಲುಪೇಟೆ 22, ಯಳಂದೂರು 11, ಕೊಳ್ಳೇಗಾಲ 20 ಹಾಗೂ ಹನೂರು 9 ಪ್ರಕರಣಗಳು ಕಂಡುಬಂದಿದೆ. ಒಟ್ಟಾರೆ 98 ಪ್ರಕರಣಗಳಲ್ಲಿ 97 ಬಾಲ್ಯವಿವಾಹಗಳನ್ನು ತಡೆದಿದ್ದು, 1 ರಲ್ಲಿ ಪ್ರಕರಣ ದಾಖಲಾಗಿದೆ. 2023-24 ನೇ ಸಾಲಿನಲ್ಲಿ ಚಾಮರಾಜನಗರ 21, ಗುಂಡ್ಲುಪೇಟೆ 71, ಯಳಂದೂರು 6 ಹಾಗೂ ಹನೂರು-ಕೊಳ್ಳೇಗಾಲ ವ್ಯಾಪ್ತಿಯಲ್ಲಿ 48 ದೂರುಗಳನ್ನು ಒಳಗೊಂಡಂತೆ ಒಟ್ಟು 146 ದೂರುಗಳು ದಾಖಲಾಗಿದೆ. ಅದರಲ್ಲಿ 142 ಪ್ರಕರಣಗಳಲ್ಲಿ ಬಾಲ್ಯವಿವಾಹ ತಡೆಯಲಾಗಿದ್ದು, 4 ರಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 2022-23 ನೇ ಸಾಲಿನಲ್ಲಿ ಚಾಮರಾಜನಗರ 17, ಗುಂಡ್ಲುಪೇಟೆ 8, ಯಳಂದೂರು 1 ಹಾಗೂ ಹನೂರು-ಕೊಳ್ಳೇಗಾಲ ವ್ಯಾಪ್ತಿಯಲ್ಲಿ 22 ದೂರುಗಳನ್ನು ಒಳಗೊಂಡಂತೆ ಒಟ್ಟು 48 ಬಾಲ್ಯವಿವಾಹ ದೂರುಗಳು ದಾಖಲಾಗಿದೆ. ಅದರಲ್ಲಿ 45 ಬಾಲ್ಯವಿವಾಹಗಳನ್ನು ತಡೆಯಲಾಗಿದ್ದು, 3 ರಲ್ಲಿ ೆಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಜು.17 ಪ್ರತಿಜ್ಞಾವಿಧಿ ಸ್ವೀಕಾರ:

ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತಗೊಳಿಸುವ ನಿಟ್ಟಿನಲ್ಲಿ ಜು.17 ರಂದು ಜಿಲ್ಲಾದ್ಯಂತ ಬೃಹತ್ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕಚೇರಿ, ತಾಲೂಕು ಕಚೇರಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಏಕಕಾಲದಲ್ಲಿ ಪ್ರತಿಜ್ಞಾ ಸ್ವೀಕಾರ ಸಮಾರಂಭವನ್ನು ನಡೆಸಲು ಯೋಜಿಸಲಾಗಿದೆ. ಒಟ್ಟಾರೆಯಾಗಿ ನ.14 ರವರೆಗೂ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತಗೊಳಿಸಲು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.