ಹಳಿಯಾಳ: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಹಳಿಯಾಳ- ದಾಂಡೇಲಿ- ಜೊಯಿಡಾ ವಿಧಾನಸಭೆ ಕ್ಷೇತ್ರದಲ್ಲಿ ಈಗಾಗಲೇ ತಯಾರಿ ಆರಂಭವಾಗಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಪಕ್ಷದ ಮುಖಂಡ, ಶಾಸಕ ಆರ್.ವಿ. ದೇಶಪಾಂಡೆ ಅವರು ಗುರುವಾರ ಹುಣ್ಸವಾಡ, ಕೆ.ಕೆ.ಹಳ್ಳಿ, ಕಾಳಗಿನಕೊಪ್ಪ, ಕರ್ಲಕಟ್ಟಾ ಗ್ರಾಮದಲ್ಲಿ ಸಭೆ ನಡೆಸಿದ್ದಾರೆ. ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕರ್ತರು ಹಾಗೂ ಗ್ರಾಮೀಣ ಮುಖಂಡರಿಗೆ ಸಲಹೆ-ಸೂಚನೆ ನೀಡಿದ್ದಾರೆ.
ಈ ವೇಳೆ ಕಾರ್ಯಕರ್ತರು ಮತ್ತು ಗ್ರಾಮೀಣ ಮುಖಂಡರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಶಾಸಕ ಆರ್.ವಿ.ದೇಶಪಾಂಡೆ, ಸಾಕಷ್ಟು ಅಭಿವೃದ್ಧಿ, ಜನಪರ ಕೆಲಸಗಳನ್ನು ನಾವು ಮಾಡಿದ್ದೇವೆ. ಆದರೆ, ಅವುಗಳ ಕುರಿತು ಜನಸಾಮಾನ್ಯರಿಗೆ ಮನವರಿಕೆ ಮತ್ತು ಪ್ರಚಾರ ಮಾಡುವಲ್ಲಿ ನಾವು ಎಡವುತ್ತದೇವೆ. ಇದರಿಂದಾಗಿಯೇ ಇಂದು ಕಾಂಗ್ರೆಸ್ಗೆ ಹಿನ್ನಡೆಯಾಗುತ್ತಿದೆ ಎಂದು ಹೇಳಿದರು.
ಕಾಳಿನದಿ ನೀರಾವರಿ ಯೋಜನೆ ಕಾಮಗಾರಿ ನಡೆದಿದೆ. ಗ್ರಾಮಾಂತರ ಭಾಗದ ಜೀವಜಲದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಈ ಯೋಜನೆಗಳ ಬಗ್ಗೆ ಮನೆ ಮನೆಗಳಿಗೆ ತೆರಳಿ ಮನವರಿಕೆ ಮಾಡಿ. ಗ್ರಾಪಂ ಅಭ್ಯರ್ಥಿಗಳ ಆಯ್ಕೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಗ್ರಾಮ, ವಾರ್ಡ್ ಮಟ್ಟದಲ್ಲಿ ಕಾರ್ಯಕರ್ತರು ಸಭೆ ಸೇರಿ ಉತ್ತಮ ವ್ಯಕ್ತಿತ್ವವುಳ್ಳ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಗೆಲ್ಲಿಸಿರಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೊರ್ವೆಕರ, ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಮಹೇಶ್ವರಿ ಮಿಶಾಳೆ, ಬಿ.ಡಿ.ಚೌಗಲೆ, ಸಂಜು ಮಿಶಾಳೆ, ಪ್ರಕಾಶ ಪಾಕ್ರೆ, ಪ್ರಮೋದ ಪಾಟೀಲ, ಶೋಭಾ ರಾವಳ, ಎನ್.ವಿ.ಗೌಡ, ಮೋಹನ ನಾಕಾಡಿ, ನಂದಾ ಕೊರ್ವೆಕರ, ಎಸ್.ಪಿ.ಪಾಟೀಲ ಇದ್ದರು.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಮೆಕ್ಕೆಜೋಳದ ಬೆಲೆ ಕುಸಿದಿದ್ದು ರೈತರ ಪರಿಸ್ಥಿತಿ ಚಿಂತಾಜನಕವಾಗಿದ್ದರು ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುತ್ತಿಲ್ಲ. ಈ ವಿಷಯವನ್ನು ಪ್ರತಿ ಮತದಾರರಿಗೂ ತಲುಪಿಸಬೇಕು.| ಎಸ್.ಎಲ್. ಘೊಟ್ನೇಕರ ವಿ.ಪ. ಸದಸ್ಯ