ಚಾಮರಾಜನಗರ : ಚಾಮರಾಜನಗರ ಜಿಲ್ಲಾ ಇ- ಆಫೀಸ್ ಯೋಜನೆಗೆ ಸೇರ್ಪಡೆಯಾಗಿದ್ದು, ಪ್ರಥಮ ಹಂತದಲ್ಲಿ ತಾಲೂಕಿನ 25 ಗ್ರಾಮ ಆಡಳಿತಾಧಿಕಾರಿಗಳಿಗೆ ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಕ ಸಿ.ಪುಟ್ಟರಂಗಶೆಟ್ಟಿ ಇತ್ತೀಚೆಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿ, ರೈತರು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ದಾಖಲಾತಿಗಳನ್ನು ನೀಡಿ, ಅವರು ಕಚೇರಿಗೆ ಅಲೆಯುವಂತೆ ಮಾಡಬಾರದು. ನೀವು ನೀಡುವ ಪ್ರತಿಯೊಂದು ದಾಖಲಾತಿಗಳಲ್ಲಿ ಅವರ ಭವಿಷ್ಯ ಅಡಗಿರುತ್ತದೆ. ಕಂದಾಯ ಇಲಾಖೆಯ ಇ-ಆಫೀಸ್ ಸೇವೆಯಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ಜಿಲ್ಲೆಯ ಅಧಿಕಾರಿಗಳು ಹಾಗೂ ಗ್ರಾಮ ಅಡಳಿತಾಧಿಕಾರಿಗಳು ಶ್ರಮಪಟ್ಟ ಕರ್ತವ್ಯ ನಿರ್ವಹಿಸಿದ ಫಲವಾಗಿ ಮೊದಲ ಸ್ಥಾನ ಬಂದಿದೆ. ಇದು ನಮ್ಮೆಲ್ಲರಿಗೂ ಹೆಮ್ಮ ತಂದಿದೆ ಎಂದರು.
ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಇಲಾಖೆಗೆ ಹೊಸತನವನ್ನು ನೀಡುತ್ತಿದ್ದಾರೆ. ಹೀಗಾಗಿ ಬೆರಳಿನ ತುದಿಯಲ್ಲಿಯೇ ಎಲ್ಲಾ ದಾಖಲಾತಿಗಳು ಸಿಗುವಂತಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ರೈತರಿಗೆ ಒಳ್ಳೆಯ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಿ. ಸರ್ಕಾರ ಯೋಜನೆಗಳು ಸಹ ಅರ್ಹರಿಗೆ ದೊರೆಯುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಈ ವೇಳೆ ತಹಶೀಲ್ದಾರ್ ಗಿರಿಜಾ, ರಾಜಸ್ವ ನಿರೀಕ್ಷಕ ರಾಜಶೇಖರ್, ಗ್ರಾಮ ಆಡಳಿತಾಧಿಕಾರಿ ಸಂತೋಷ್ ಹಾಗೂ ಇತರರು ಹಾಜರಿದ್ದರು.