ಜಿಲ್ಲೆ

ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್

ಕೊಪ್ಪ: ಸರ್ಕಾರದ ಕೆಲಸಗಳು ಆನ್‌ಲೈನ್ ಮೂಲಕ ನಡೆಯುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾವ್ ವಿತರಣೆ ಮಾಡಲಾಗುತ್ತಿದೆ. ಇದರಿಂದ ಕಂದಾಯ ಇಲಾಖೆ ಕೆಲಸಕ್ಕೆ ಇನ್ನಷ್ಟು ವೇಗ ನೀಡಲು ಸಾಧ್ಯವಾಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ತಾಲೂಕು ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಲ್ಯಾಪ್‌ಟಾಪ್ ವಿತರಣೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನ ನಾಗಾಲೋಟದಲ್ಲಿದೆ. ಆನ್‌ಲೈನ್ ಕಾಲಘಟ್ಟದಲ್ಲಿ ನಾವು ಸಹ ತಂತ್ರಜ್ಞಾನ ಬಳಸಿಕೊಂಡು ಕೆಲಸ ನಿರ್ವಹಿಸಿದರೆ ವೇಗವಾಗಿ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಕಂದಾಯ ಇಲಾಖೆಯಲ್ಲಿ ಹಲವು ಯೋಜನೆಗಳು ಅಂರ್ತಜಾಲದ ಮೂಲಕ ನಮೂದಿಸಬೇಕಾಗಿದೆ. ಅತಿವೃಷ್ಟಿ ಮಾಹಿತಿ, ಬೆಳೆ ಸಮೀಕ್ಷೆ ಇತರ ಯೋಜನೆಗಳು ಅಂರ್ತಜಾಲದ ಮೂಲಕವೇ ಕೆಲಸ ಮಾಡುತ್ತಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಶುದ್ಧ ನೀರು ನೀಡುವ ಉದ್ದೇಶದಿಂದ ನೀರು ಶುದ್ಧೀಕರಣ ಘಟಕವನ್ನು ಸರ್ಕಾರದಿಂದ ನೀಡಲಾಗುತ್ತಿದೆ ಎಂದರು.

ಕೊಪ್ಪ ತಾಲೂಕಿನ 9 ಹಾಗೂ ಶೃಂಗೇರಿ ತಾಲೂಕಿನ 5 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ತಹಸೀಲ್ದಾರ್ ಲಿಖಿತಾ ಮೋಹನ್, ತಾಪಂ ಇಒ ನವೀನ್‌ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ನಾಮ ನಿರ್ದೇಶಿತ ಸದಸ್ಯರು ಇದ್ದರು.