ಜಿಲ್ಲೆ

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ

ಕೊಳ್ಳೇಗಾಲ: ತಾಲೂಕು ಪಂಚಾಯಿತಿ ಆವರಣದಲ್ಲಿ ಬುಧವಾರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕ ಸದಸ್ಯರು ಗ್ರಾಮ ಆಡಳಿತ ಅಧಿಕಾರಿಗಳ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಟ್ಟು ಹೋರಾಟ ಆರಂಭಿಸಿರುವ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳು ಅಗತ್ಯ ಮೂಲಸೌಲಭ್ಯಗಳು, ಸೇವಾ ಸೌಲಭ್ಯಗಳನ್ನು ಒದಗಿಸಲು ಹಲವು ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದಿರುವ ಹಿನ್ನೆಲೆಯಲ್ಲಿ ತಾಲೂಕು ಘಟಕದ ಗ್ರಾಮ ಆಡಳಿತಾಧಿಕಾರಿಗಳು ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು, ನಮ್ಮ ಬೇಡಿಕೆಗಳಾದ ತಮ್ಮ ಕರ್ತವ್ಯ ನಿರ್ವಹಣೆಗೆ ಅಗತ್ಯವಿರುವ ಮೂಲಸೌಲಭ್ಯಗಳ ಕೊರತೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಡಿಕೆಗಳೇನು?:

ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಷನ್‌ಗಳ ನಿರ್ವಹಣೆಗೆ ಲ್ಯಾಪ್‌ಟಾಪ್, ಪ್ರಿಂಟರ್, ಇಂಟರ್‌ನೆಟ್, ಸ್ಕ್ಯಾನರ್ ಸೇರಿದಂತೆ ಅಗತ್ಯ ಪರಿಕರಗಳನ್ನು ಒದಗಿಸುವುದು ಹಾಗೂ ಕಚೇರಿಗಳ ವ್ಯವಸ್ಥೆಯನ್ನು ಸುಧಾರಿಸುವುದು ಅವರ ಪ್ರಮುಖ ಬೇಡಿಕೆಯಾಗಿದೆ. ಕಂದಾಯ ಇಲಾಖೆಯಲ್ಲಿ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಪದೋನ್ನತಿ ಹಾಗೂ ವರ್ಗಾವಣೆ ಪ್ರಕ್ರಿಯೆಯನ್ನು ಪುನರಾರಂಭಿಸಬೇಕು. ಗ್ರಾಮ ಆಡಳಿತಾಧಿಕಾರಿಗಳಿಗೆ ಜಾಬ್ ಚಾಟ್ ಕೊಡಬೇಕೆಂದು ಒತ್ತಾಯವಿದೆ. ಅಲ್ಲದೆ, ಕೆಸಿಎಸ್‌ಆರ್ ನಿಯಮ 15ಎ ಉಪಖಂಡ (2) ಅನ್ನು ಹಿಂಪಡೆದು, ಸಮನ್ವಯ ಗೈಡ್ ಲೈನ್ಸ್ ರೂಪಿಸುವಂತೆ ಆಗ್ರಹಿಸುತ್ತಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಶಾಂತರಾಜು, ಮಹೇಶ್, ಸತೀಶ್, ಕುಮಾರ್, ರಾಕೇಶ್, ಪ್ರದೀಪ್, ಲಾವಣ್ಯ, ಚಂದನ, ಸಫಿಯಾ, ರೂಪಾ, ಮಮತಾ ಮತ್ತಿತರಿದ್ದರು.