ಸಾಗರ ತಾಲೂಕಿನ ಹೆಗ್ಗೋಡು ಸಂಪೆಕೈ ಬೆಟ್ಟದಲ್ಲಿ ಆಯೋಜಿಸಿದ್ದ ಬೆಟ್ಟ ಕಾನು ಸಂರಕ್ಷಣೆ ಜಾಗೃತಿ ಅಭಿಯಾನಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ಮೋಹನ್‌ಕುಮಾರ್, ಅನಂತ ಹೆಗಡೆ ಅಶೀಸರ, ಆನೆಗೊಳಿ ಸುಬ್ಬರಾವ್, ಬಿ.ಎಚ್.ರಾಘವೇಂದ್ರ ಇತರರಿದ್ದರು. 
ಜಿಲ್ಲೆ

ಗ್ರಾಮ ಅರಣ್ಯ ರಕ್ಷಣೆಗೆ ಸಹಕಾರ ಅಗತ್ಯ

ಟಿ.ಎಚ್.ಸಂತೋಷ್ ಕುಮಾರ್

ಸಾಗರ: ಪಶ್ಚಿಮಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ ಜಾರಿಗೆ ತಂದ ಕಾನು ಅರಣ್ಯ ಯೋಜನೆ ಮೂಲಕ ಸುಮಾರು 20ಸಾವಿರ ಎಕರೆ ಅರಣ್ಯ ರಕ್ಷಣೆ ಸಾಧ್ಯವಾಗಿದೆ. ಗ್ರಾಮ ಅರಣ್ಯಗಳ ಸಂರಕ್ಷಣೆಗೆ ರೈತರ ಸಹಕಾರ ಅಗತ್ಯ ಎಂದು ಉಪ ಅರಣ್ಯ ಸಂರಕ್ಷಣಾಕಾರಿ ಮೋಹನ್‌ಕುಮಾರ್ ಹೇಳಿದರು.

ಸಾಗರ ತಾಲೂಕಿನ ಹೆಗ್ಗೋಡು ಸಂಪೆಕೈ ಬೆಟ್ಟದಲ್ಲಿ ಬುಧವಾರ ಆಯೋಜಿಸಿದ್ದ ಬೆಟ್ಟ ಕಾನು ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಜಾಗೃತಿ ಅಭಿಯಾನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪರಿಸರ ಉಳಿದಾಗ ಮಾತ್ರ ಮನುಷ್ಯನ ಬದುಕು ಹಸನಾಗುತ್ತದೆ. ಕಾನು ಅರಣ್ಯ ಉಳಿಸುವ ಇಲಾಖೆಯ ಸಂಕಲ್ಪಕ್ಕೆ ಸಾರ್ವಜನಿಕರು ಕೈಜೋಡಿಸಬೇಕು. ಪರಿಸರ ಉಳಿವು ನಮ್ಮೆಲ್ಲರ ಜವಾಬ್ದಾರಿ ಎಂದರು.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಬೆಟ್ಟಕಾನು ಸಂರಕ್ಷಣೆ ಅಭಿಯಾನ ಜೂನ್ ಕೊನೆಯವರೆಗೆ ನಡೆಯುತ್ತದೆ. ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಹಳ್ಳಿಗಳಲ್ಲಿ ಗ್ರಾಮ ಅರಣ್ಯ ಸಮಿತಿ ಮತ್ತಿತರರ ಸಹಕಾರದೊಂದಿಗೆ ನಡೆಯುವ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು. ಗ್ರಾಮ ನೈಸರ್ಗಿಕ ಭೂಮಿ ಸುಸ್ಥಿರ ಅಭಿವೃದ್ಧಿಗೆ ಎಲ್ಲರೂ ಜಾಗೃತರಾಗಬೇಕು. ಮಲೆನಾಡಿನ ಪ್ರಜ್ಞಾವಂತ ನಾಗರಿಕರು ಪರಿಸರ ಸಂರಕ್ಷಣೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಪರಿಸರತಜ್ಞ ಆನೆಗುಳಿ ಸುಬ್ರಾವ್ ಮಾತನಾಡಿ, ಮಲೆನಾಡಿನ ನಿಸರ್ಗ ಜೀವವೈವಿಧ್ಯ ಉಳಿವಿಗೆ ನಡೆಯುವ ಜಾಗೃತಿ ಅಭಿಯಾನ ಅತ್ಯಂತ ಮಹತ್ವದ್ದಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಪರಿಸರದ ಜತೆ ಎಲ್ಲರೂ ನಿಕಟ ಸಂಬಂಧ ಇರಿಸಿಕೊಳ್ಳಬೇಕು. ಪರಿಸರವನ್ನು ಯಾವುದೇ ಕಾರಣಕ್ಕೂ ನಾಶ ಮಾಡುವ ಕೆಲಸಗಳಿಗೆ ಬೆಂಬಲ ನೀಡಬಾರದು ಎಂದರು.

ಸೊರಬ ಪರಿಸರ ವೇದಿಕೆ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ, ಕೇಶವ ಸಂಪೆಕೈ, ಬಿ.ಎಚ್.ರಾಘವೇಂದ್ರ, ಕವಲಕೋಡು ವೆಂಕಟೇಶ್, ಅಣ್ಣಪ್ಪ, ರಂಗನಾಥ್, ಶ್ರೀಕಂಠೇಗೌಡ, ಗಣಪತಿ ಬೀಸಲಕೊಪ್ಪ, ಎಂ.ಜಿ.ರಾಮಚಂದ್ರ ಇತರರಿದ್ದರು.