ಜಿಲ್ಲೆ

ಗ್ರಾಪಂಗೊಂದು ಸ್ವಚ್ಛ ಸಂಕೀರ್ಣ, 101 ಪಂಚಾಯಿತಿಗೆ ಜಾಗ ಮಂಜೂರು, 42ರಲ್ಲಿ ಕಾರ್ಯನಿರ್ವಹಣೆ

Bengaluru Rural

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ತ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣದತ್ತ ಹೆಜ್ಜೆ ಇಟ್ಟಿರುವ ಜಿಪಂ ಸ್ವಚ್ಛಭಾರತ ಮಿಷನ್‌ನಡಿ ಗ್ರಾಪಂಗೆ ಒಂದರಂತೆ ತ್ಯಾಜ್ಯ ಸಂಸ್ಕರಣಾ ಘಟಕ ಕಾರ್ಯಾರಂಭಕ್ಕೆ ಮುಂದಾಗಿದೆ.

ಈಗಾಗಲೇ 101 ಪಂಚಾಯಿತಿಗಳಲ್ಲಿ ಕಾರ್ಯಾರಂಭಕ್ಕೆ ಸ್ಥಳ ಮಂಜೂರಾಗಿದ್ದು, ಕೆಲವೇ ತಿಂಗಳಲ್ಲಿ ಘಟಕ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಸಂಸ್ಕರಣೆ ಆರಂಭಿಸುವ ಗುರಿ ಹೊಂದಲಾಗಿದೆ. ನಗರ, ಪಟ್ಟಣ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಕಸ ಸಂಗ್ರಹ ಹಾಗೂ ಸಂಸ್ಕರಣೆ ಕಾರ್ಯ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು, ಸ್ವಚ್ಛ ಗ್ರಾಪಂ ನಿರ್ಮಾಣ ಉದ್ದೇಶಕ್ಕೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಣ ಕಸ ಟಾರ್ಗೆಟ್: ಒಣಕಸ ಸಂಸ್ಕರಣೆಗೆ ಆದ್ಯತೆ ನೀಡಿದ್ದು, ಈಗಾಗಲೇ ಮಜರಾಹೊಸಹಳ್ಳಿ, ಮಣ್ಣೆ, ಸೋಂಪುರ, ಬೆಟ್ಟಕೋಟೆ, ಅಣ್ಣೇಶ್ವರ ಸೇರಿ ಪ್ರಮುಖ ಪಂಚಾಯಿತಿ ವ್ಯಾಪ್ತಿಗಳಲ್ಲಿ ಒಣ ಕಸ ಸಂಗ್ರಹ ಹಾಗೂ ಸಂಸ್ಕರಣೆ ನಡೆಯುತ್ತಿದೆ. ಪ್ರತಿ ಗ್ರಾಪಂಗಳಲ್ಲೂ ಒಣ ಕಸ ಸಂಗ್ರಹ ಹಾಗೂ ಸಂಸ್ಕರಣಾ ಘಟಕ ಆರಂಭವಾಗಲಿದೆ. ಇದರ ಮುಂದುವರಿದ ಭಾಗವಾಗಿ ಹಸಿಕಸ ಸಂಸ್ಕರಣಾ ಘಟಕಗಳ ಕಾರ್ಯಾರಂಭಕ್ಕೆ ಸಿದ್ಧತೆ ನಡೆದಿದೆ. ಈಗಾಗಲೇ 101 ಪಂಚಾಯಿತಿಗಳ ಪೈಕಿ 42ರಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡು ಸಂಸ್ಕರಣೆ ನಡೆಯುತ್ತಿದೆ. 59 ಪಂಚಾಯಿತಿಗಳಲ್ಲಿ ಜಾಗ ಗುರುತಿಸಲಾಗಿದ್ದು, ಇದರಲ್ಲಿ 20 ಘಟಕಗಳ ಕಾಮಗಾರಿ ಅಂತಿಮ ಹಂತಕ್ಕೆ ಬಂದಿವೆ ಎಂದು ಜಿಪಂ ತಿಳಿಸಿದೆ.

ಒಣಕಸ ವಿಲೇವಾರಿ ಸಂಬಂಧ ರೂಪುರೇಷೆ ಸಿದ್ಧಪಡಿಸಲಾಗಿದೆ. ಹಸಿ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ರಿಯಾಯಿತಿ ದರದಲ್ಲಿ ವಿತರಿಸುವ ಚಿಂತನೆ ಇದೆ.

ಆಟೋ ಟಿಪ್ಪರ್: ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಸ ಸಂಗ್ರಹಕ್ಕೆ ಆಟೋಟಿಪ್ಪರ್ ವ್ಯವಸ್ಥೆ ಮಾಡಲಾಗಿದೆ, ಮನೆಮನೆ ಬಳಿ ತೆರಳಿ ಒಣ ಕಸ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ, ಇದಕ್ಕಾಗಿಯೇ ಪಂಚಾಯಿತಿಯಿಂದ ಕಸದ ಡಬ್ಬ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಸಿ ಕಸಕ್ಕೂ ಪ್ರತ್ಯೇಕ ಡಬ್ಬ ನೀಡಿ ಪ್ರತ್ಯೇಕಿಸಿದ ಕಸ ಪಡೆಯುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿದೆ.

ಏಕರೂಪದ ಬ್ರ್ಯಾಂಡಿಂಗ್: ಪ್ರತಿ ಘಟಕಗಳು ಒಂದೇ ಮಾದರಿಯಲ್ಲಿ ರೂಪುಗೊಳ್ಳಲಿದೆ, ಸ್ವಚ್ಛ ಸಂಕೀರ್ಣ ಬ್ರ್ಯಾಂಡಿಂಗ್ ಮಾಡುವ ಉದ್ದೇಶದಿಂದ ಕ್ರಮಕೈಗೊಳ್ಳಲಾಗಿದೆ. ಪ್ರತಿ ಉಪಕರಣ, ಕಟ್ಟಡದ ಮಾದರಿ ಸೇರಿ ಪ್ರತಿಯೊಂದು ಒಂದೇ ರೂಪದಲ್ಲಿ ಇರಲಿದೆ.

ನ್ಯಾಪ್ಕಿನ್ ಬರ್ನಿಂಗ್ ಮಷಿನ್: ಈಗಾಗಲೇ 15ಕ್ಕೂ ಹೆಚ್ಚು ಘಟಕಗಳಲ್ಲಿ ನ್ಯಾಪ್ಕಿನ್ ಬರ್ನಿಂಗ್ ಯಂತ್ರ ಅಳವಡಿಸಲಾಗಿದೆ. ಕಂಪನಿಯೊಂದಕ್ಕೆ ಕ್ರಿಯಾಯೋಜನೆ ಕಳುಹಿಸಿದ್ದು, ಕೆಲವೇ ದಿನಗಳಲ್ಲಿ ಪ್ರತಿ ಘಟಕದಲ್ಲೂ ಕಾರ್ಯಾರಂಭ ಮಾಡಲಿವೆ ಎಂದು ಜಿಪಂ ತಿಳಿಸಿದೆ.

ಸ್ವಸಹಾಯ ಗುಂಪುಗಳಿಗೆ ಉದ್ಯೋಗ: ಕಾರ್ಯನಿರ್ವಹಿಸುತ್ತಿರುವ ಘಟಕಗಳಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಉದ್ಯೋಗ ದೊರಕಿಸಿದ್ದು, 6 ತಿಂಗಳು ಗೌರವಧನ ನೀಡುವ ವ್ಯವಸ್ಥೆ ಮಾಡಲಾಗಿದೆ. ಬಳಿಕ ಘಟಕದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದಲೇ ಆದಾಯ ದೊರಕಿಸಿಕೊಳ್ಳಲು ಅವರಿಗೆ ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳನ್ನು ಕಸಮುಕ್ತಗೊಳಿಸುವ ಸದುದ್ದೇಶದೊಂದಿಗೆ 101 ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆ ಹಾಗೂ ಸಂಸ್ಕರಣಾ ಘಟಕಗಳ ನಿರ್ಮಾಣವಾಗುತ್ತಿವೆ. ಇದಕ್ಕೆ ಸಂಬಂಧಪಟ್ಟಂತೆ ಪರಿಕರ ಅಳವಡಿಕೆ ಮತ್ತಿತರ ಕಾರ್ಯ ಚುರುಕುಗೊಂಡಿದೆ. ಪ್ರಸ್ತುತ ಒಣ ಕಸ ಸಂಗ್ರಹ ಹಾಗೂ ಸಂಸ್ಕರಣೆ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಂ.ಆರ್.ರವಿಕುಮಾರ್, ಜಿಪಂ ಸಿಇಒ