ಜಿಲ್ಲೆ

ಗ್ರಾಪಂಗಳಲ್ಲೇ ಆಧಾರ್ ನೋಂದಣಿ ಕೇಂದ್ರ

ಗಜೇಂದ್ರಗಡ: ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿಯೇ ಆಧಾರ್ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಇದರಿಂದ ಹಳ್ಳಿಗರು ಇನ್ಮುಂದೆ ಆಧಾರ್ ನೋಂದಣಿ, ತಿದ್ದುಪಡಿಗಾಗಿ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ.

ಕಾಮನ್ ಸರ್ವೀಸ್ ಸೆಂಟರ್ (ಸಿಎಸ್​ಸಿ) ಹಾಗೂ ಇ-ಗವರ್ನೆನ್ಸ್ ಸರ್ವೀಸ್ ಪ್ರೈವೆಟ್ ಲಿಮಿಟೆಡ್ (ಎಸ್​ಪಿವಿ) ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಗೆ 5ರಂತೆ ರಾಜ್ಯದ 150 ಗ್ರಾಪಂಗಳಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮೊದಲು ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಯುಐಡಿಎಐ ಮತ್ತು ಇ-ಆಡಳಿತ ಸಹಯೋಗದೊಂದಿಗೆ ಆಧಾರ್ ತಿದ್ದುಪಡಿ ಕೇಂದ್ರ ಅನುಷ್ಠಾನಗೊಳಿಸಲಾಗಿತ್ತು. ಆಧಾರ್ ತಿದ್ದುಪಡಿಗಾಗಿ ಯುಐಡಿಎಐ ಅವರ ಯುಸಿಎಲ್ ಕ್ಲೈಂಟ್ ಸಾಫ್ಟ್​ವೇರ್ ಮತ್ತು ಗ್ರಾಪಂಗಳ ಬಯೋಮೆಟ್ರಿಕ್ ಡಿವೈಸ್​ಗಳನ್ನು ಬಳಸಲಾಗಿತ್ತು. ಆದರೆ, ಯುಸಿಎಲ್ ಕ್ಲೈಂಟ್ ಸಾಫ್ಟ್​ವೇರ್​ನಲ್ಲಿ ನ್ಯೂನತೆ ಉಂಟಾಗಿದ್ದರಿಂದ ಆಧಾರ್ ತಿದ್ದುಪಡಿ ಕೇಂದ್ರಗಳು ಸ್ಥಗಿತಗೊಂಡಿದ್ದವು.

ಗ್ರಾಪಂಗಳಲ್ಲಿ ಸಿಬ್ಬಂದಿ ಮೂಲಕ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರಗಳನ್ನು ಸ್ಥಾಪಿಸಿದರೆ ದೈನಂದಿನ ಕಾರ್ಯಗಳಿಗೆ ತೊಂದರೆ ಯಾಗುತ್ತದೆ. ಆಧಾರ್ ಕೇಂದ್ರದ ಉದ್ದೇಶಿತ ಕಾರ್ಯ ಪರಿಣಾಮಕಾರಿಯಾಗಿ ಅನುಷ್ಠಾನ ವಾಗುವುದಿಲ್ಲ. ಆದ್ದರಿಂದ ಗ್ರಾಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳಡಿ ಆಧಾರ್ ಕೇಂದ್ರ ಸೇವೆ ಒದಗಿಸಲಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಪಂ, ಗದಗ ತಾಲೂಕಿನ ಲಕ್ಕುಂಡಿ ಗ್ರಾಪಂ, ರೋಣ ತಾಲೂಕಿನ ಅಬ್ಬಿಗೇರಿ ಗ್ರಾಪಂ, ನರಗುಂದ ತಾಲೂಕಿನ ಶಿರೋಳ ಗ್ರಾಪಂ, ಶಿರಹಟ್ಟಿ ತಾಲೂಕಿನ ಸೂರಣಗಿ ಗ್ರಾಪಂನಲ್ಲಿ ಆಧಾರ್ ಕೇಂದ್ರ ಕಾರ್ಯ ನಿರ್ವಹಿಸಲಿವೆ.

ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 43 ಸೇವೆಗಳು, ಕಂದಾಯ ಇಲಾಖೆಯ 40 ಹಾಗೂ ಇನ್ನಿತರ ಸೇವೆಗಳನ್ನು ಒದಗಿಸಲು ಉದ್ದೇಶಿಸಲಾಗಿತ್ತು. ಆದರೆ, ಈ ಸೇವೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. ಗ್ರಾಪಂ ಸಿಬ್ಬಂದಿ ನರೇಗಾ, ಪಂಚತಂತ್ರ, ಎಸ್​ಬಿಎಂ-ಜಿ, ಇ- ಸ್ವತ್ತು, ಗಾಂಧಿ ಸಾಕ್ಷಿ ಕಾಯಕ ಮತ್ತು ಇನ್ನಿತರ ತಂತ್ರಾಂಶಗಳನ್ನು ನಿರ್ವಹಿಸುತ್ತಿರುವುದರಿಂದ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ನೀಡುವ ಸೇವೆಗಳ ವಿಲೇವಾರಿ ಕುಂಠಿತಗೊಂಡಿದೆ. ಆದ್ದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಎಸ್​ಸಿಯೊಂದಿಗೆ ಸೇವೆಗಳನ್ನು ಒದಗಿಸಲು ಒಪ್ಪಂದ ಮಾಡಿಕೊಂಡಿದೆ. ಅದರಂತೆ ಬಾಪೂಜಿ ಸೇವಾ ಕೇಂದ್ರಗಳಡಿ ಇರುವ ಸೇವಾ ಸಿಂಧು ಸೇವೆಗಳು ಹಾಗೂ ಡಿಜಿಟಲ್ ಸೇವೆಗಳನ್ನು ಸಿಎಸ್​ಸಿ ಆಪರೇಟರ್ಸ್ ಮೂಲಕ ವಿತರಿಸಲಿವೆ.

ಇಲಾಖೆಯು ಆಧಾರ್ ಕೇಂದ್ರ ಸ್ಥಾಪಿಸಲು ಗ್ರಾಪಂ ಕಚೇರಿಯಲ್ಲಿ ಸ್ಥಳಾವಕಾಶ, ವಿದ್ಯುತ್, ಇಂಟರ್​ನೆಟ್ ಸೇರಿ ಮೂಲಸೌಲಭ್ಯ ಕಲ್ಪಿಸಲಿದೆ. ಸಿಎಸ್​ಸಿ ಮತ್ತು ಎಸ್​ಪಿವಿಯವರು ಆಧಾರ್ ಕಿಟ್ ಅಳವಡಿಕೆ, ನೌಕರರನ್ನು ನೇಮಿಸಲಿದ್ದಾರೆ. ಗ್ರಾಪಂಗಳಲ್ಲಿ ಆಧಾರ್ ಕೇಂದ್ರಗಳು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ತೆರೆದಿರುತ್ತವೆ. ಪ್ರತಿ ಆಧಾರ್ ಕಾರ್ಡ್ ನೋಂದಣಿ ಉಚಿತ. ಆಧಾರ್ ಕಾರ್ಡ್​ತಿದ್ದುಪಡಿಗೆ ಸಂಗ್ರಹವಾಗುವ 100 ರೂ.ಗಳಲ್ಲಿ ಸಿಎಸ್​ಸಿ ಮತ್ತು ಎಸ್​ಪಿವಿಗೆ 85 ರೂ. ಹಾಗೂ ಗ್ರಾಪಂಗೆ 15 ರೂ. ಸೇರಲಿದೆ. ಆಧಾರ್ ನೋಂದಣಿ ಮತ್ತು ತಿದ್ದುಪಡಿ ಮಾಡಲು ಉಂಟಾಗುವ ತಪ್ಪುಗಳಿಗೆ ಯುಐಡಿಎಐ ವಿಧಿಸುವ ದಂಡವನ್ನು ಸಿಎಸ್​ಸಿ- ಎಸ್​ಪಿವಿ ಅವರೇ ಭರಿಸುವರು. ಸಿಎಸ್​ಸಿ

ಆಪರೇಟರ್ಸ್​ಗೆ ನಿಯೋಜಿಸಲಾದ ಕರ್ತವ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ಗ್ರಾಪಂ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಇ-ಆಡಳಿತ) ನಿರ್ದೇಶಕರು ಸೂಚನೆ ನೀಡಿದ್ದಾರೆ.

ಯಾವ ಕಚೇರಿಯಲ್ಲಿ ಎಷ್ಟು ಕೇಂದ್ರ ?

ರಾಜ್ಯದ ವಿವಿಧ ಸರ್ಕಾರಿ ಕಚೇರಿಗಳ 2260 ಕೇಂದ್ರಗಳಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯ ಮಾಡಲಾಗುತ್ತಿದೆ. ಇವುಗಳಲ್ಲಿ 448 ಅಟಲ್​ಜೀ ಜನಸ್ನೇಹಿ ಕೇಂದ್ರಗಳು, 677 ಬ್ಯಾಂಕ್​ಗಳು, 903 ಅಂಚೆ ಕಚೇರಿಗಳು, 58 ಬೆಂಗಳೂರು ಒನ್ ಕೇಂದ್ರಗಳು, 68 ಕರ್ನಾಟಕ ಒನ್ ಕೇಂದ್ರಗಳು ಹಾಗೂ 106 ಬಿಬಿಎಂಪಿ ಕಚೇರಿಗಳು ಸೇರಿವೆ.