ಬಸವಕಲ್ಯಾಣ ತಾಲೂಕಿನ ಸಸ್ತಾಪುರದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂ ಜನಪ್ರತಿನಿಧಿಗಳ ತರಬೇತಿ ಕಾರ್ಯಾಗಾರವನ್ನು ಶಶಿಧರ ಕೋಸಂಬೆ ಉದ್ಘಾಟಿಸಿದರು. ವೆಂಕಟೇಶ್, ಬ್ರಹ್ಮಾರಡ್ಡಿ, ರಮೇಶ ಸುಲ್ಫಿ, ಗೌತಮ ಸಿಂಧೆ ಇದ್ದರು. 
ಜಿಲ್ಲೆ

ಗ್ರಾಪಂಗಳಲ್ಲಿ ರಕ್ಷಣಾ ಕಾವಲು ಸಮಿತಿ ರಚಿಸಿ

ಬಸವಕಲ್ಯಾಣ: ತಾಲೂಕಿನಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ರಚಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

ಸಸ್ತಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು ಮತ್ತು ತಾಲೂಕು ಪಂಚಾಯಿತಿಯಿಂದ ಶುಕ್ರವಾರ ಆಯೋಜಿಸಿದ್ದ ಗ್ರಾಪಂ ಜನಪ್ರತಿನಿಧಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಹಕ್ಕುಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಮಕ್ಕಳ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ಶಿಕ್ಷಕರನ್ನು ಗುರುವಿನ ಸ್ಥಾನದಲ್ಲಿ ಕಾಣಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಕೆಲ ಶಿಕ್ಷಕರು ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಎಸಗುತ್ತಿರುವುದು ತೀವ್ರ ಆತಂಕ ತರಿಸಿದೆ. ಮಕ್ಕಳ ರಕ್ಷಣೆ ಕೇವಲ ಪಾಲಕರದಷ್ಟೇ ಅಲ್ಲ. ಮಕ್ಕಳ ಬೆಳವಣಿಗೆಯಲ್ಲಿ ಇಡೀ ಸಮುದಾಯದ ಪಾತ್ರ ಅಡಗಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಅಧಿಕಾರಿಗಳು ಮಕ್ಕಳ ಹಕ್ಕುಗಳ ಬಗ್ಗೆ ತಿಳಿದುಕೊಂಡು ಕನಿಷ್ಠ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಹಿಂಸೆ, ಹಲ್ಲೆ, ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಪೋಕ್ಸೊದಂಥ ಪ್ರಕರಣಗಳನ್ನು ತಡೆಯಬೇಕು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಬ್ರಹ್ಮಾರಡ್ಡಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ವೆಂಕಟೇಶ್, ತಾಪಂ ಇಒ ರಮೇಶ ಸುಲ್ಫಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಸಿಂಧೆ ಇತರರಿದ್ದರು.