ನಿಗದಿ ಕಾರ್ಯ ನಾಳೆ ಪ್ರಾರಂಭ ತಂತ್ರಾಂಶ ಆಧಾರಿತ ವ್ಯವಸ್ಥೆ ಬಳಕೆ ವದಂತಿಗೆ ಕಿವಿಗೊಡದಿರಿ ಜಿಲ್ಲಾಧಿಕಾರಿ ದಿವ್ಯಾಪ್ರಭು ಹೇಳಿಕೆ
ಚಿತ್ರದುರ್ಗ: ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸುವ ಕಾರ್ಯಕ್ರಮ ಜೂ.19ರಿಂದ 22ರವರೆಗೆ ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ತಿಳಿಸಿದ್ದಾರೆ.
ಕಳೆದ 1993ರಿಂದ 2015ರವರೆಗೆ ಮತ್ತು 2020ರಲ್ಲಿ ನಿಗದಿಪಡಿಸಿದ ಮೀಸಲಾತಿ ಹಾಗೂ ವಿವಿಧ ಮೀಸಲು ವರ್ಗದ ಸದಸ್ಯ ಸ್ಥಾನಗಳನ್ನು ಗಣನೆಗೆ ತೆಗೆದುಕೊಂಡು ಮೀಸಲಾತಿ ನಿರ್ಧರಿಸಲಾಗುತ್ತದೆ. 2020ರಲ್ಲಿ ಯಾವ ಗ್ರಾಪಂ ಈ ಹುದ್ದೆಗಳು ಯಾವ ವರ್ಗ ಅಥವಾ ಮಹಿಳೆಗೆ ಸ್ಥಾನ ಮೀಸಲಾಗಿದೆಯೇ ಅಂಥ ಗ್ರಾಪಂಗಳಿಗೆ ಅದೇ ಮೀಸಲಾತಿ ಪುನರಾವರ್ತನೆಯಾಗದಂತೆ ಗಮನಹರಿಸಲಾಗಿದೆ.
ಮೀಸಲಾತಿ ನಿಗದಿಯು ತಂತ್ರಾಂಶವನ್ನು ಆಧರಿಸಿದ್ದು, ಇದರಲ್ಲಿ ಯಾರೊಬ್ಬರ ಹಸ್ತಕ್ಷೇಪ, ಪ್ರಭಾವಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಯಾರೂ ವದಂತಿಗಳಿಗೆ ಕಿವಿಗೊಡಬಾರದು. ಒಂದು ವೇಳೆ ಯಾರಾದರೂ, ಮೀಸಲಾತಿ ನಿಗದಿ ಮಾಡಿಸುವ ಬಗ್ಗೆ ಪ್ರಭಾವ ಬೀರಲು, ಆಮಿಷವೊಡ್ಡಲು ಪ್ರಯತ್ನಿಸಿದರೆ ತಮ್ಮ ಕಚೇರಿಗೆ ದೂರು ನೀಡುವಂತೆ ತಿಳಿಸಿದ್ದಾರೆ.
ಜೂ.19ರ ಬೆಳಗ್ಗೆ 11ಕ್ಕೆ ಮೊಳಕಾಲ್ಮೂರಿನ ಗುರುಭವನ, ಮಧ್ಯಾಹ್ನ 3ಕ್ಕೆ ಚಳ್ಳಕೆರೆಯ ಗುರು ರಾಘವೇಂದ್ರ ಕಲ್ಯಾಣ ಮಂಟಪ. 20ರ ಬೆಳಗ್ಗೆ 11ಕ್ಕೆ ಹೊಳಲ್ಕೆರೆಯ ವಾಲ್ಮೀಕಿ ಸಮುದಾಯ ಭವನ, ಮಧ್ಯಾಹ್ನ 3ಕ್ಕೆ ಹೊಸದುರ್ಗದ ಗೌಸಿಯಾ ಶಾದಿಮಹಲ್. 21ರ ಬೆಳಗ್ಗೆ 11ಕ್ಕೆ ಹಿರಿಯೂರಿನ ತಹಾ ಕಲ್ಯಾಣ ಮಂಟಪ ಹಾಗೂ 22ರ ಬೆಳಗ್ಗೆ 11ಕ್ಕೆ ಚಿತ್ರದುರ್ಗದ ತಿರುಮಲ ಕಲ್ಯಾಣ ಮಂಟಪದಲ್ಲಿ ಮೀಸಲು ನಿಗದಿಯಾಗಲಿದೆ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.